ಮನೋರಂಜನೆ

ಶಹನಾಯಿ ವಾದಕ ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್ ನಿಧನ

Pinterest LinkedIn Tumblr

Ustad Ali Ahmad Hussain Khan 4

ಕೋಲ್ಕತಾ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಶಹನಾಯಿ ವಾದಕ ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್(77) ಅವರು ಬುಧವಾರ ನಿಧನರಾಗಿದ್ದಾರೆ.

ಮೂತ್ರಪಿಂಡ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಖಾನ್ ಅವರನ್ನು ಹಲವು ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್ ಅವರು ಐವರು ಪುತ್ರರು, ಐವರು ಪುತ್ರಿಯರು ಹಾಗೂ ಹಲವಾರು ಮೊಮ್ಮಕ್ಕಳನ್ನು ಅಗಲಿದ್ದಾರೆ.

ವಾರಾಣಸಿ ಶಹನಾಯಿ ಸಂಗೀತವನ್ನು ಪ್ರತಿನಿಧಿಸುತ್ತಿದ್ದ ಖಾನ್ ಅವರನ್ನು ಹಿಂದುಸ್ತಾನಿ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ 2009ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವಾರಾಣಸಿಯ ಖ್ಯಾತ ಶಹನಾಯಿ ವಾದಕರ ಕುಟುಂಬಕ್ಕೆ ಸೇರಿದ ಖಾನ್ ತಮ್ಮ ಸಂಶೋಧನಾತ್ಮಕ ಶೈಲಿ ಮತ್ತು ಶಾಸ್ತ್ರೀಯ, ಅರೆ ಶಾಸ್ತ್ರೀಯ ಮತ್ತು ಜಾನಪದ ಸಂಗೀತ ಮೇಲಿನ ಪಾರಮ್ಯಕ್ಕಾಗಿ ಜನಪ್ರಿಯರಾಗಿದ್ದರು.

ಖಾನ್ ಅವರು ಭಾರತವಲ್ಲದೆ ಬೆಲ್ಜಿಯಂ, ರಷ್ಯ, ಸ್ವಿಟ್ಜರ್ಲೆಂಡ್, ಫ್ರಾನ್ಸ್, ಟ್ಯುನೀಷಿಯ, ಸಿಂಗಾಪುರ, ಇಂಡೋನೇಷ್ಯಾ, ಹಾಂಕಾಂಗ್ ಮತ್ತು ಫಿಲಿಪ್ಪೈನ್ಸ್ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಶಹನಾಯಿ ವಾದನದ ಸವಿ ಉಣಿಸಿದ್ದರು. 1973ರಲ್ಲಿ ದೂರದರ್ಶನ ಉದ್ಘಾಟನಾ ಸಮಾರಂಭದಲ್ಲೂ ಅವರು ಶಹನಾಯಿ ವಾದನ ಮಾಡಿದ್ದರು.

Write A Comment