ರಾಷ್ಟ್ರೀಯ

ದುರಂತಕ್ಕೆ ಕಾರಣವಾಯಿತು ಮಕ್ಕಳಾಡಿದ ತಮಾಷೆ ಆಟ !

Pinterest LinkedIn Tumblr

boy-died

ವಿಲ್ಲಿಪುರಂ: ಶಾಲೆಯಲ್ಲಿ ಜಗಳವಾಡುವ ವೇಳೆ ಸಹಪಾಠಿಯನ್ನು ತಳ್ಳಿದ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆಯೊಂದು ಚೆನ್ನೈ ಸೇಲಂನ ಅಮ್ಮಯ್ಯಗರಂ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಬಾಲಮುರುಗನ್ (12) ಮೃತ ಬಾಲಕನಾಗಿದ್ದು, ಪೂಂಡಿ ಗ್ರಾಮದ ರೈತನೋರ್ವನ ಮಗನಾಗಿದ್ದಾನೆ. 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ನಿನ್ನೆ ಶಾಲೆಗೆ ಹೋಗಿದ್ದ ಬಾಲಮುರುಗನ್ ತರಗತಿಯಲ್ಲಿ ಆಟವಾಡುತ್ತಿದ್ದ. ತರಗತಿಯಲ್ಲಿ ಮುರುಗನ್ (ಹೆಸರು ಬದಲಿಸಲಾಗಿದೆ) ಹಾಗೂ ಗೌತಮ್ ಎಂಬುವವರು ಜಗಳವಾಡಲು ಆರಂಭಿಸಿದ್ದಾರೆ. ಈವೇಳೆ ಮುರುಗನ್ ತನ್ನ ಗೆಳೆಯ ಗೌತಮ್ ನನ್ನು ತಳ್ಳಿದ್ದಾನೆ. ಈತ ಬಾಲಮುರುಗನ್ ಮೇಲೆ ಬಿದ್ದಿದ್ದಾನೆ. ಈ ವೇಳೆ ಬಾಲಮುರುಗನ್ ತಲೆ ರಭಸವಾಗಿ ಮೇಜಿಗೆ ಹೊಡೆದುಕೊಂಡಿದೆ. ನಂತರ ಬಾಲಮುರುಗನ್ ಮೂಗಿನಿಂದ ರಕ್ತಸ್ರಾವವಾಗಿ, ಜ್ಞಾನತಪ್ಪಿ ಬಿದ್ದಿದ್ದಾನೆ.

ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದೆ. ಆದರೂ, ಬಾಲಕ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾನೆಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ವೇಳೆ ಬಾಲಕನ ಸಾವು ಕುರಿತಂತೆ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಹಾಗೂ ಸಂಬಂಧಿಕರೆಲ್ಲರೂ ಶಾಲೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಸ್ಥಳೀಯರು ವಿಲ್ಲುಪುರಂ-ಸೇಲಂ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಸಿದ್ದರು. ಗ್ರಾಮಸ್ಥರು ಹೇಳುವ ಪ್ರಕಾರ, ಶಾಲೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಶಿಕ್ಷಕರ ಕೊರತೆಯಿದೆ ಎಂದು ಹೇಳಿದ್ದಾರೆ.

ಮೂಲಗಳಿಂದ ತಿಳಿದುಬಂದಿರುವ ಪ್ರಕಾರ, ಪ್ರಸ್ತುತ ಶಾಲೆಯಲ್ಲಿ ಮುಖ್ಯಶಿಕ್ಷಕರು ಸೇರಿ 10 ಶಿಕ್ಷಕರಿದ್ದು, ಇವರಲ್ಲಿ ಪರೀಕ್ಷೆ ನಿಮಿತ್ತ 4 ಶಿಕ್ಷಕರನ್ನು ಕಲ್ಲಾಕುರಿಚಿ ಶಾಲೆಗೆ ಕಳುಹಿಸಲಾಗಾದೆ. ಹೀಗಾಗಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ ಎಂದು ಹೇಳಲಾಗುತ್ತಿದೆ.

ತಮ್ಮ ಮಗನ ಸಾವಿನ ಕುರಿತಂತೆ ಅಳಲು ತೋಡಿಕೊಂಡಿರುವ ಬಾಲಕನ ತಾಯಿ ಪರಮೇಶ್ವರಿ ಅವರು, ವಿದ್ಯಾರ್ಥಿಗಳು ಜಗಳವಾಡುತ್ತಿದ್ದರೂ, ಅವರನ್ನು ನಿಯಂತ್ರಿಸಲು ತರಗತಿಯಲ್ಲಿ ಶಿಕ್ಷಕರಿರಲಿಲ್ಲ. ಹೀಗಾಗಿ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಇದರಂತೆ ಘಟನೆ ನಡೆಯುತ್ತಿದ್ದಂತೆ ಶಾಲೆಯ ಆಡಳಿತ ಮಂಡಳಿಯವರು ಶಾಲೆಗೆ ಅರ್ಧ ದಿನದ ಮಟ್ಟಿಗೆ ರಜೆಯನ್ನು ಘೋಷಣೆ ಮಾಡಿದ್ದಾರೆ.

ಇನ್ನು ಘಟನೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಬಾಲಕನ ಸಂಬಂಧದವರು, ಶಿಕ್ಷಕರ ವಿರುದ್ಧ ಆಡಳಿತ ಮಂಡಳಿಯವರು ಕಠಿಣ ಕ್ರಮಕೈಗೊಳ್ಳದಿದ್ದರೆ ಶಾಲೆ ನಡೆಸಲು ಬಿಡುವುದಿಲ್ಲ. ನಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇವೆಂದು ಹೇಳಿದ್ದಾರೆ. ನಂತರ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಗ್ರಾಮಸ್ಥರನ್ನು ಸಮಾಧಾನಪಡಿಸಿ, ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಿದ್ದಾರೆ.

ವಿಲ್ಲುಪುರಂ ಶಿಕ್ಷಣಾಧಿಕಾರಿಗಳು ಮಾತನಾಡಿ, ಇಬ್ಬರು ಮಕ್ಕಳು ಒಂದೇ ಗ್ರಾಮದ ಹುಡುಗರಾಗಿದ್ದು, ಇಬ್ಬರ ಮಧ್ಯೆ ಯಾವುದೇ ಶತ್ರುತ್ವವಿರಲಿಲ್ಲ. ಮಕ್ಕಳು ತಮಾಷೆಗೆ ಆಟವಾಡುತ್ತಿದ್ದದ್ದು ದುರಂತಕ್ಕೆ ಕಾರಣವಾಗಿದೆ. ನಿಜಕ್ಕೂ ದುರಾದೃಷ್ಟಕರ ಸಂಗತಿ. ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಪ್ರಸ್ತುತ ಬಾಲಕನನ್ನು ತಳ್ಳಿದ ಮುರುಗನ್ (ಹೆಸರು ಬದಲಿಸಲಾಗಿದೆ)ನನ್ನು ವಶಕ್ಕೆ ಪಡೆದಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

Write A Comment