ರಾಷ್ಟ್ರೀಯ

ಬ್ಯಾಟ್ಸ್ ಮೆನ್ ಗಳಿಗೆ ಹಬ್ಬ :ಟಿ-20 ಗೆ ಕ್ಷಣಗಣನೆ…

Pinterest LinkedIn Tumblr

20ನಾಗಪುರ, ಮಾ.14- ಟಿ 20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭಗೊಂಡಿದ್ದು , ಈಗಾಗಲೇ ಎಲ್ಲಾ ತಂಡಗಳು ಭಾರತಕ್ಕೆ ಆಗಮಿಸಿದ್ದು , ಪ್ರಶಸ್ತಿ ಗೆಲ್ಲುವ ಫೇವರೇಟ್‌ಗಳ ಸಾಲಿನಲ್ಲಿ ಈಗ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಕೂಡ ಸೇರ್ಪಡೆಗೊಂಡಿದೆ. ಈಗಾಗಲೇ ಆಸಿಸ್ ವಿರುದ್ಧ ಟಿ 20 ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಿ ಏಷ್ಯಾ ಕಪ್ ಚಾಂಪಿಯನ್ ಶಿಪ್ ಪಟ್ಟ ಗಿಟ್ಟಿಸಿರುವ ಭಾರತ ತಂಡ ನಿರೀಕ್ಷೆಯಂತೆ ಹಾಟ್ ಫೇವರೇಟ್ ಆಗಿದೆ. ಈಗಾಗಲೇ ಕಳೆದ ಒಂದು ವರ್ಷದಲ್ಲಿ 11 ಟಿ 20 ಪಂದ್ಯಗಳಲ್ಲಿ ಹತ್ತರಲ್ಲಿ ಜಯ ಸಾಧಿಸಿ ಧೋನಿ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಫಾರಂನಲ್ಲಿದೆ. ಸ್ವದೇಶದಲ್ಲೇ ಆಡುತ್ತಿರುವುದರಿಂದ ಮತ್ತೊಂದು ಪ್ಲಸ್ ಪಾಯಿಂಟ್ ಜತೆಗೆ ವಾತಾವರಣ ಕೂಡ ಅನುಕೂಲಕರವಾಗಲಿದೆ ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದಾರೆ.

ಇದಲ್ಲದೆ ಇಲ್ಲಿನ ಕ್ರಿಕೆಟ್ ಪ್ರಿಯರು ತಮ್ಮ ತಂಡಕ್ಕೆ ಒಳ್ಳೆಯ ಸಾಥ್ ನೀಡಿ ಹುರಿದುಂಬಿಸುತ್ತಾರೆ. ಯಾವುದೇ ಕ್ಷಣದಲ್ಲೂ ಪುಟಿದೇಳುವಂತಹ ಸ್ಟಾರ್ ಆಟಗಾರರು ಧೋನಿ ಬಳಗದಲ್ಲಿದ್ದಾರೆ ಎಂದು ಹೇಳಿದ್ದಾರೆ. ಇದರ ನಡುವೆ ಆಸಿಸ್‌ನ ಸ್ಮಿತ್ ಹುಡುಗರನ್ನು ಕೂಡ ಹಗುರವಾಗಿ ಪರಿಗಣಿಸುವಂತಿಲ್ಲ. ಮ್ಯಾಕ್ಸ್ ಮೆಲ್ ವಾರ್ನರ್ ಫ್ರಿಂಚ್‌ರಂತಹ ಸ್ಫೋಟಕ ಬ್ಯಾಟ್ಸ್‌ಮೆನ್‌ಗಳು ಚೆಂಡನ್ನು ಮೈದಾನದ ಹೊರಗೆ ಅಟ್ಟುವ ಪ್ರಾಬಲ್ಯ ಹೊಂದಿದ್ದಾರೆ. ಯಾವುದೇ ತಂಡವನ್ನು ಮಣಿಸುವ ಶಕ್ತಿ ಸಂಪಾದಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಭಾರತದ ಪಿಚ್‌ಗಳು ಅವರಿಗೇನು ಹೊಸದೇನಲ್ಲ. ಯಾವ ಸಂದರ್ಭದಲ್ಲಿ ಹೇಗೆ ಆಡಬೇಕು ಎಂಬುದನ್ನು ಬಲ್ಲ ಚಾಣಕ್ಯರು ಆಸಿಸ್ ತಂಡದಲ್ಲಿದ್ದಾರೆ.

ಇದಲ್ಲದೆ ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮೆನ್‌ಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಕಳೆದ ಹಲವು ಟಿ-20 ಪಂದ್ಯಗಳಲ್ಲಿ ಅವರು ಅಬ್ಬರಿಸಿದ ಪರಿ ನೋಡಿದರೆ ಬೆಚ್ಚಿ ಬೀಳುವಂತದ್ದು. ಹೊಸ ಸ್ಫೂತಿಯೊಂದಿಗೆ ಭಾರತಕ್ಕೆ ಬಂದಿರುವ ಆಟಗಾರರು ಕೂಡ ಪ್ರಶಸ್ತಿ ಗೆಲ್ಲಿಸುವ ಫೇವರೇಟ್‌ಗಳಲ್ಲಿ ಒಬ್ಬರು.  ಪಂದ್ಯದ ದಿಕ್ಕನ್ನೇ ಬದಲಿಸುವ ವಿಲಿಯಮ್ಸ್‌ನ್ ಆಂಡ್ರ್‌ಸನ್, ಗುಪ್ಟಿಲ್‌ರಂತಹ ಘಟಾನುಘಟಿಗಳು ಇದ್ದಾರೆ. ಆದರೆ ಕಳೆದ 2014ರಿಂದೀಚೆಗೆ ನ್ಯೂಜಿಲೆಂಡ್ ಹೆಚ್ಚು ಟಿ 20 ಪಂದ್ಯಗಳನ್ನು ಆಡದಿರುವುದು ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಬಹುದು.

ಬ್ಯಾಟಿಂಗ್ ಆರ್ಡರ್‌ನಲ್ಲೂ  ಪದೇ ಪದೇ ಏರುಪೇರು ಮಾಡುತ್ತಿರುವುದು ಕೂಡ ತಂಡಕ್ಕೆ ಪೆಟ್ಟು ನೀಡುತ್ತಿದೆ. ಆದರೆ ತಂಡದಲ್ಲಿ ಒಂದಲ್ಲ ಒಂದು ಆಟಗಾರ ಏಕಾಂಗಿಯಾಗಿ ನಿಂತು ಗೆಲವು ತಂದು ಕೊಡುವ ಬ್ಯಾಟ್ಸ್‌ಮೆನ್‌ಗಳಿರುವುದು ಅವರ ಬತ್ತಳಿಕೆಯಲ್ಲಿರುವ ಅಸ್ತ್ರ ಎಂದು ಹೇಳಲಾಗಿದೆ. ಉಳಿದಂತೆ ದಕ್ಷಿಣ ಆಫ್ರಿಕಾ ಈ ಬಾರಿ ನಿರೀಕ್ಷೆಗೂ ಮೀರಿದ ಪ್ರದರ್ಶನವನ್ನು ನೀಡಬಹುದು. ಆದರೆ ಒತ್ತಡಕ್ಕೆ ಸಿಲುಕಿ ಪ್ರಶಸ್ತಿಯ ಸನಿಹದಲ್ಲಿ ಎಡವುದು ಸಾಮಾನ್ಯವಾಗಿದೆ. ವಿಶ್ವ ಕ್ರಿಕೆಟ್‌ನ ಅಗ್ರಮಾನ್ಯ ಬ್ಯಾಟ್ಸ್‌ಮೆನ್ ಎಂಬ ಕೀರ್ತಿ ಪಡೆದಿರುವ ಡಿವಿಲಿಯರ್ಸ್ದ ಹೊಸ ಪ್ಲ್ಯಾನ್‌ನೊಂದಿಗೆ ಈ ಬಾರಿ ಕಣಕ್ಕಿಳಿಯುತ್ತಾರೆ ಎನ್ನಲಾಗಿದೆ.

ಸ್ಟೇನ್‌ಗೆ ಭಾರತದ ಪಿಚ್‌ಗಳು ಫೇವರೇಟ್‌ಗಳು. ಅವರ ವೇಗಕ್ಕೆ ವಿಕೆಟ್‌ಗಳು ಉರುಳುವುದು ನಿಶ್ಚಿತ. ಇದಲ್ಲದೆ ಡುವಿನಿ, ಮಿಲ್ಲರ್ಸ್ಲ , ಆಮ್ಲರಂತಹ  ಅನುಭವಿಗಳು ಶಕ್ತಿ ಮೀರಿ ತಂಡಕ್ಕೆ ಆಸರೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿದೆ. ನೆರೆಯ ಶ್ರೀಲಂಕಾ ಕೂಡ ಲಸಿತ್ ಮಲಿಂಗ, ದಿಲ್‌ಶನ್ ತರಂಗ, ರಂಗ ನಯರ್ ಮೇಲೆ ಇಡೀ ತಂಡ ನಿಂತಿದೆ. ಸಂಗಕ್ಕರ, ಜಯವರ್ದನೆಯರಂತಹ ಹಿರಿಯ ಆಟಗಾರರು ನಿವೃತ್ತಿಯಾದ ಬಳಿಕ ಯುವ ಪಡೆಯನ್ನೇ ನೆಚ್ಚಿಕೊಂಡು ಟಿ 20 ಸಮರಕ್ಕೆ ಇಳಿಯಬೇಕಾಗಿದೆ. ಒಳ್ಳೆಯ ಆಟಗಾರರಿದ್ದರೂ ನಿರೀಕ್ಷಿತ ಮಟ್ಟದ ಪ್ರದರ್ಶನ ಬಾರದಿರುವುದು ಲಂಕಾ ಅಭಿಮಾನಿಗಳ ಚಿಂತೆಯಾಗಿದೆ.

ಗಾಯಗೊಂಡಿದ್ದ ಮಲಿಂಗ ಚೇತರಿಸಿಕೊಂಡಿದ್ದು , ಟಿ 20ಯಲ್ಲಿ ತಂಡವನ್ನು ಮುನ್ನಡೆಸುವ ಜತೆಗೆ ಬೌಲಿಂಗ್ ಅಸ್ತ್ರಕ್ಕೆ ಜೀವ ತುಂಬಲಿದ್ದು , ಬ್ಯಾಟಿಂಗ್‌ನಲ್ಲಿ ಈಗ ಚೇತರಿಕೆ ಕಂಡು ಬರಬೇಕಾಗಿದೆ. ಉಳಿದಂತೆ ಪಾಕಿಸ್ತಾನಕ್ಕೆ ಇದೊಂದು ಪ್ರತಿಷ್ಠೆಯ ಚಾಂಪಿಯನ್ ಶಿಪ್ ಆಗಿದ್ದು, ಅಫ್ರಿದಿ ಮೇಲೆ ಎಲ್ಲಾ ಒತ್ತಡ ಬಿದ್ದಿದೆ. ಏಷ್ಯಾ ಕಪ್‌ನಲ್ಲಿ ಕಂಡ ಸೋಲು ಇನ್ನು ಬಾಧಿಸುತ್ತಿದೆ. ಆದರೆ ಇದನ್ನು ವಿಶ್ವಕಪ್ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂಬಂತೆ ಅಫ್ರಿದಿ ತನ್ನ ಸಹ ಆಟಗಾರರನ್ನು ಹುರಿದುಂಬಿಸಿ ಶಾಂತಚಿತ್ತದಿಂದ ಆಡುವಂತೆ ಸಲಹೆ ನೀಡಿದ್ದಾರೆ.

ಟಾಪ್ ಆರ್ಡರ್ ಬ್ಯಾಟ್ಸ್‌ಮೆನ್‌ಗಳು ಲಯ ಕಂಡುಕೊಳ್ಳದೇ ಇರುವುದು ಚಿಂತೆಗೆ ಕಾರಣವಾಗಿದೆ. ಆದರೆ ಬೌಲಿಂಗ್ ವಿಭಾಗದಲ್ಲಿ ತಂಡ ಮತ್ತೆ ಶಕ್ತಿ ಪ್ರದರ್ಶಿಸಲು ವೇದಿಕೆ ಸಿದ್ಧಗೊಂಡಿದೆ ಎಂದು ಹೇಳಲಾಗಿದೆ. ಇನ್ನು ಅರ್ಹತಾ ಸುತ್ತಿನ ಮೂಲಕ ಸ್ಥಾನ ಗಿಟ್ಟಿಸಿರುವ ಬಾಂಗ್ಲಾ ದೇಶ ಹಾಗೂ ಆಫ್ಘಾನಿಸ್ತಾನ ಬಲಿಷ್ಠ ತಂಡಗಳಿಗೆ ಶಾಕ್ ನೀಡುವುದಂತೂ ಖಚಿತ. ಈ ತಂಡದಲ್ಲಿರುವ ಯುವ ಆಟಗಾರರು ಬ್ಯಾಟ್ಸ್‌ಮೆನ್‌ಗಳನ್ನು ಕಟ್ಟಿ ಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಕ್ರಿಕೆಟ್ ಚಾಕಚಕ್ಯತೆಯನ್ನು ಬಹಳಷ್ಟು ಕಲಿತಿರುವ ಈ ತಂಡಗಳು ಲೀಗ್ ಹಂತದಲ್ಲಿ ನಿರ್ಗಮಿಸಬಹುದು. ಆದರೆ ಪಾಯಿಂಟ್ಸ್ ಟೇಬಲ್‌ನಲ್ಲಿ ಪ್ರಮುಖ ತಂಡಗಳಿಗೆ ಕಂಟಕರಾಗಬಹುದು ಎಂದು ಹೇಳಲಾಗಿದೆ.

ಪಂದ್ಯ ನಡೆಯುವ ನಗರಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದ್ದು , ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದೆ.  ಭಾರತದಲ್ಲಿ ಯುವ ಸಮುದಾಯಕ್ಕೆ ಕ್ರಿಕೆಟ್ ಮಜಾ ಸವಿಯಲು ಪರೀಕ್ಷೆಗಳು ಅಡ್ಡಿಯಾಗಬಹುದು. ಆದರೆ ಅವರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಟಿ 20 ವಿಶ್ವಕಪ್ ಮುಗಿಯುತ್ತಿದ್ದಂತೆ ಘಟಾನುಘಟಿ ಆಟಗಾರರು ನಿವೃತ್ತಿ ಘೋಷಿಸುವ ಸಾಧ್ಯತೆಯೂ ಕೂಡ ಹೆಚ್ಚಾಗಿದೆ. ಇದರ ಸಾಲಿನಲ್ಲಿ ಅಫ್ರಿದಿ, ಮಲಿಂಗ, ಸ್ಟೇನ್, ವ್ಯಾಟ್ಸನ್‌ರಂತಹ ಹಲವರಿದ್ದಾರೆ.

Write A Comment