ರಾಷ್ಟ್ರೀಯ

ಆರ್ಟ್ ಆಫ್ ಲಿವಿಂಗ್ ಆಯೋಜಿಸಿರುವ ‘ವಿಶ್ವ ಸಾಂಸ್ಕೃತಿಕ ಉತ್ಸವ’ದಲ್ಲಿ ಪಾಕ್ ಕಲಾವಿದರ ಸಂಭ್ರಮ

Pinterest LinkedIn Tumblr

art-of-living

ನವದೆಹಲಿ: ಆರ್ಟ್ ಆಫ್ ಲಿವಿಂಗ್ ಆಯೋಜಿಸಿರುವ ‘ವಿಶ್ವ ಸಾಂಸ್ಕೃತಿಕ ಉತ್ಸವ’ದಲ್ಲಿ ವಿಶ್ವದ ನಾನಾ ರಾಷ್ಟ್ರಗಳಿಂದ ಜನರು ಭಾಗವಹಿಸಿದ್ದು, ಪಾಕಿಸ್ತಾನದಿಂದ ೮೦ ಮಂದಿ ಪಾಲ್ಗೊಂಡು ಶಾಂತಿ ಮತ್ತು ಪ್ರೀತಿಯನ್ನು ಹರಡಲು ಪ್ರಯತ್ನಿಸಿದರು.

ಮೂರು ದಿನಗಳ ಕಾಲದ ವಿಶ್ವ ಸಾಂಸ್ಕೃತಿಕ ಉತ್ಸವ ಆರಂಭಗೊಂಡಿದ್ದು, ಉತ್ಸವದಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕೆ ಕೊಂಡಿ ಬೆಸೆಯುವ ಪೂರಕ ವಾತಾವರಣವಿರುವುದು ಸಾಬೀತಾಗಿದೆ ಎಂದು ವಿದೇಶಿಗರು ಅಭಿಪ್ರಾಯಪಟ್ಟಿದ್ದಾರೆ.

ಫ್ರೆಂಚ್‌ನ ಮಾಜಿ ಪ್ರಧಾನಿ ಡೊಮಿನಿಕ್ ಡೇ ವಿಲ್ಲೆಪಿನ್, ನೇಪಾಳದ ಉಪ ಪ್ರಧಾನಿ ಕಮಲ್ ಥಾಪಾ, ಸುರಿನೇಮ್‌ನ ಉಪಾಧ್ಯಕ್ಷ ಅಶ್ವಿನ್ ಅಧೀನ್ ಮತ್ತು ಶ್ರೀಲಂಕಾ ಸಂಸತ್‌ನ ಸ್ಪೀಕರ್ ಜಯಸೂರ್ಯ ಮತ್ತಿತರ ಗಣ್ಯರು ಉತ್ಸವಕ್ಕೆ ಸಾಕ್ಷಿಯಾದರು.

ಭಾರತ ಮತ್ತು ಪಾಕಿಸ್ತಾನದ ನಡುವಣ ಈ ಉತ್ಸವ ಬಾಂಧವ್ಯ ಬೆಸೆದಿದೆ. ಇಂತಹುದೇ ಕೆಲ ಹೆಜ್ಜೆಗಳನ್ನಿಟ್ಟರೆ ಸಾಮರಸ್ಯ ಮೂಡುವ ಪ್ರಯತ್ನಗಳು ಮತ್ತಷ್ಟು ಬಲಗೊಳ್ಳುತ್ತವೆ ಎಂದು ಪೇಶಾವರದ ಜಫರ್ ಉಲ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ಯಮುನಾ ನದಿ ತೀರದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಹಾಗೂ ಲಕ್ಷಾಂತರ ಮಂದಿ ಭವ್ಯ ಸಮಾರಂಭವನ್ನು ಚಾಲನೆಗೊಳಿಸಿದರು.

ಪಾಕಿಸ್ತಾನದ ೮೦ ಮಂದಿ ಸಮಾರಂಭಕ್ಕೆ ಸಾಥ್ ನೀಡಿದ್ದಾರೆ. ನಿಜಕ್ಕೂ ಅದ್ಭುತವಾದುದು. ಲಕ್ಷಾಂತರ ಜನ ಒಬ್ಬರ ಸಂಸ್ಕೃತಿಯನ್ನು ಮತ್ತೊಬ್ಬರು ಗೌರವಿಸುವುದು ನಿಜಕ್ಕೂ ಅನುಕರಣೀಯ ಎಂದು ಬಲ್ಗೇರಿಯಾದ ಕೊನ್‌ಸ್ಟೆನಿ ಡ್ರಗೋವ್ ತಿಳಿಸಿದ್ದಾರೆ. ಇಷ್ಟು ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಇದೇ ಮೊದಲು ಎಂದು ಉದ್ಘರಿಸಿದ್ದಾರೆ. ೨ನೇ ದಿನವಾದ ಉತ್ಸವದಲ್ಲಿ ಇಂದೂ ಕೂಡಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರೆಯಲಿವೆ.

Write A Comment