ರಾಷ್ಟ್ರೀಯ

ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ ಕನಯ್ಯಾ ಕುಮಾರ್‌ಗೆ ಜೀವ ಬೆದರಿಕೆಯೊಡ್ಡಿರುವ ಪೋಸ್ಟರ್

Pinterest LinkedIn Tumblr

kanhaiya-kumar

ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷ ಕನಯ್ಯಾ ಕುಮಾರ್, ಉಮರ್ ಖಾಲೀದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಅವರಿಗೆ ಜೀವ ಬೆದರಿಕೆಯೊಡ್ಡಿರುವ ಪೋಸ್ಟರ್‌ಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ಇತ್ತೀಚೆಗಷ್ಟೇ ಕನಯ್ಯಾ ಅವರನ್ನು ಹತ್ಯೆ ಮಾಡಿದರೆ ರು.11 ಲಕ್ಷ ಬಹುಮಾನ ನೀಡುತ್ತೇನೆ ಎಂದು ಪೋಸ್ಟರ್ ಹಂಚಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು. ಜೀವ ಬೆದರಿಕೆಯೊಡ್ಡಿರುವ ಈ ಹೊಸ ಪೋಸ್ಟರ್‌ಗಳು ವಾಟ್ಸಾಪ್ ನಲ್ಲಿ ಮತ್ತು ಇನ್ನಿತರ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಇದರ ಪ್ರತಿಯೊಂದು ಜಂತರ್ ಮಂತರ್ ನಲ್ಲಿ ಪ್ರತ್ಯಕ್ಷವಾಗಿದೆ ಎಂದು ಸುದ್ದಿ ಹಬ್ಬಿತ್ತು.

ಆದಾಗ್ಯೂ, ಪೊಲೀಸರು ಅಲ್ಲಿ ಹೋಗಿ ಶೋಧ ನಡೆಸಿದರೂ, ಅಲ್ಲಿ ಪೋಸ್ಟರ್ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಪೋಸ್ಟರ್‌ನಲ್ಲಿ ರಾಷ್ಟ್ರಧರ್ಮಕ್ಕಾಗಿ ನಾನು ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಮತ್ತು ಕನಯ್ಯಾನನ್ನು ಹತ್ಯೆ ಮಾಡುತ್ತೇನೆ ಎಂದು ಬರೆಯಲಾಗಿತ್ತು. ಈ ಪೋಸ್ಟರ್ ನಲ್ಲಿ ಬಲ್‌ಬೀರ್ ಸಿಂಗ್ ಭಾರತೀಯ ಎಂಬ ಹೆಸರಿದ್ದು ಈತ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಕೈಗೊಂಡಿದ್ದ ಚಳುವಳಿಯಲ್ಲಿ ಭಾಗಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಎಂದು ಹೇಳಲಾಗುತ್ತಿದೆ. ಈ ಪೋಸ್ಟರ್ ನಲ್ಲಿ ಈತನ ಫೋಟೋ ಮತ್ತು ಫೋನ್ ನಂಬರ್ ಕೂಡಾ ಇದೆ.

ಅದೇ ವೇಳೆ ಜೆಎನ್‌ಯು ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಈ ಪೋಸ್ಟರ್ ನಲ್ಲಿ ಖಂಡಿಸಲಾಗಿದೆ.ಅಫ್ಜಲ್ ಗುರು ಅವರನ್ನು ಗಲ್ಲಿಗೇರಿಸಿದ ವರ್ಷಾಚರಣೆಯನ್ನು ಮಾಡುತ್ತಿರುವ ಎಲ್ಲರನ್ನೂ ನಾನು ಶೂಟ್ ಮಾಡುತ್ತೇನೆ. ಈ ದೇಶ ಉಗ್ರರಿಗಿಂತ ಹೆಚ್ಚು ಈ ದೇಶದ್ರೋಹಿಗಳಿಂದ ಬೆದರಿಕೆ ಅನುಭವಿಸುತ್ತಿದೆ. ಇಂಥಾ ದೇಶದ್ರೋಹಿಗಳಿಗೆ ಜೀವಾವಧಿ ಶಿಕ್ಷೆಯಾಗಬೇಕು ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. ಈ ಬಗ್ಗೆ ಮಾತನಾಡಿದ ನವದೆಹಲಿಯ ಡಿಸಿಪಿ ಜತಿನ್ ನರ್ವಾಲ್, ಪ್ರಸ್ತುತ ವಿಷಯದ ಬಗ್ಗೆ ತನಿಖೆ ನಡೆದು ಬರುತ್ತಿದೆ ಎಂದಿದ್ದಾರೆ.

Write A Comment