ಶ್ರೀಹರಿಕೋಟಾ: ಇಸ್ರೋ ತನ್ನ 6ನೇ ನ್ಯಾವಿಗೇಶನ್ ಉಪಗ್ರಹ `ಐಆರೆನ್ಎಸ್ಎಸ್ 1ಎಫ್ ಯಶಸ್ವಿಯಾಗಿ ಗುರುವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಿದೆ.
ಭಾರತೀಯ ಕಾಲಮಾನ ಗುರವಾರ 4 ಗಂಟೆ 3ನಿಮಿಷಕ್ಕೆ ಉಡಾವಣೆಯಾದ ಪಿಎಸ್ಎಲ್ವಿ ಸಿ-32 ರಾಕೆಟ್ ಉಪಗ್ರಹವನ್ನು ನಭಕ್ಕೆ ಸೇರಿಸಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.
ಭಾರತ `ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ'(ಐಆರೆನ್ಎಸ್ಎಸ್) ನಿರ್ಮಿಸಲು ಇಸ್ರೋ ಯೋಜನೆ ರೂಪಿಸಿದ್ದು, ಒಟ್ಟು ಏಳು ಉಪಗ್ರಹಗಳನ್ನು ಒಳಗೊಂಡ ವ್ಯವಸ್ಥೆ ಇದಾಗಿದೆ, ಇಂದಿನದ್ದೂ ಸೇರಿಸಿ ಒಟ್ಟು 6 ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿದ್ದು, ಇನ್ನು ಒಂದು ಉಪಗ್ರಹವನ್ನು ಮುಂದಿನ ತಿಂಗಲ ಅಂತ್ಯದ ಒಳಗಡೆ ಉಡಾವಣೆ ಮಾಡುವ ಯೋಜನೆ ಇದೆ ಎಂದು ಇಸ್ರೋ ಹೇಳಿದೆ. ಅತೀ ಕನಿಷ್ಟ ಅವಧಿಯಲ್ಲಿ (50ದಿನಗಳ) ಉಪಗ್ರಹ ಉಡಾವಣೆ ಗೆ ತಯಾರಿ ಮಾಡಲಾಗಿತ್ತು ಎಂದು ಕಾರ್ಯ ನಿರ್ದೇಶಕ ಜಯಕುಮಾರ್ ಬಿ ತಿಳಿಸಿದ್ದಾರೆ.
ಈ ಉಪಗ್ರಹದಿಂದ ಸ್ಥಳೀಯವಾಗಿ ನ್ಯಾವಿಗೇಶನ್ ಸಿಸ್ಟಮ್ಗಳನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಎಲ್ಲ ಉಪಗ್ರಹಗಳ ಉಡಾವಣೆ ಯಶಸ್ವಿಯಾದಲ್ಲಿ ತನ್ನದೇ ಆದ ನ್ಯಾವಿಗೇಶನ್ ಸಿಸ್ಟಮ್ಗಳನ್ನು ಒಳಗೊಂಡ 6ನೇ ದೇಶವಾಗಿ ಭಾರತ ಹೊರ ಹೊಮ್ಮಲಿದೆ.