ಮನೋರಂಜನೆ

ವಿಶ್ವ ಟ್ವೆಂಟಿ 20 ಟೂರ್ನಿ; ಭಾರತ–ಪಾಕ್ ಪಂದ್ಯ ಸ್ಥಳಾಂತರ

Pinterest LinkedIn Tumblr

kolkatta

ನವದೆಹಲಿ/ಕೋಲ್ಕತ್ತ (ಪಿಟಿಐ): ವಿಶ್ವ ಟ್ವೆಂಟಿ 20 ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಪಂದ್ಯವು ಧರ್ಮಶಾಲಾದಿಂದ ಕೋಲ್ಕತ್ತಕ್ಕೆ ಸ್ಥಳಾಂತರಗೊಂಡಿದೆ.

ಧರ್ಮಶಾಲಾ ಎಚ್ಪಿಸಿಎ ಕ್ರೀಡಾಂಗಣದಲ್ಲಿ ಮಾರ್ಚ್ 19ರಂದು ಪಂದ್ಯ ನಡೆಯಬೇಕಿತ್ತು. ಆದರೆ, ಸ್ಥಳೀಯವಾಗಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪಾಕಿಸ್ತಾನದ ಭದ್ರತಾ ನಿಯೋಗವೂ ಭೇಟಿ ನೀಡಿ ಇಲ್ಲಿಯ ಸುರಕ್ಷತಾ ಕ್ರಮಗಳ ಕುರಿತು ಅತೃಪ್ತಿ ವ್ಯಕ್ತಪಡಿಸಿತ್ತು. ಇದರಿಂದಾಗಿ ಕೋಲ್ಕತ್ತಕ್ಕೆ ಪಂದ್ಯ ಸ್ಥಳಾಂತರಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಕ್ರಮ ಕೈಗೊಂಡಿದೆ.

ಬುಧವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವ್ ರಿಚರ್ಡ್ಸನ್ ಈ ವಿಷಯವನ್ನು ಬಹಿರಂಗಪಡಿಸಿದರು. ‘ಭದ್ರತೆಯ ಕಾರಣಗಳಿಗಾಗಿ ಪಂದ್ಯ ವನ್ನು ಧರ್ಮಶಾಲಾದಿಂದ ಕೋಲ್ಕತ್ತಕ್ಕೆ ಭಾರತ ಮತ್ತು ಪಾಕ್ ನಡುವಣ ಪಂದ್ಯವನ್ನು ಸ್ಥಳಾಂತರಿಸಲಾಗುತ್ತಿದೆ. ಮಾರ್ಚ್ 19ರಂದು ಸಂಜೆ 7.30ಕ್ಕೆ ಪಂದ್ಯ ನಡೆಯಲಿದೆ’ ಎಂದು ಡೇವ್ ಸ್ಪಷ್ಟಪಡಿಸಿದ್ದಾರೆ.

‘ಪಂದ್ಯವನ್ನು ವಿರೋಧಿಸಿ ಸತತವಾಗಿ ಟೀಕೆಗಳು, ಪ್ರತಿಭಟನೆಗಳು ಧರ್ಮಶಾಲಾ ದಲ್ಲಿ ನಡೆದಿದ್ದವು. ಐಸಿಸಿಯು ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಂದ ಮಾಹಿತಿ ಪಡೆದು ಕೊಂಡಿದ್ದೇವೆ. ಸಮರ್ಪಕವಾದ ಭದ್ರತಾ ವ್ಯವಸ್ಥೆಯ ಭರವಸೆಯನ್ನು ಪಡೆದಿದ್ದೇವೆ. ಆದರೆ, ಧರ್ಮಶಾಲಾದಲ್ಲ ಅಂತಹ ವಾತಾವರಣ ಇರದ ಕಾರಣ ಸ್ಥಳಾಂತರದ ನಿರ್ಧಾರ ಅನಿವಾರ್ಯ ವಾಯಿತು’ ಎಂದು ಹೇಳಿದ್ದಾರೆ.

ವಿರೋಧಕ್ಕೆ ಸಿಕ್ಕ ಜಯ
ಕೆಲವು ದಿವಸಗಳ ಹಿಂದೆ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದಿದ್ದ ಉಗ್ರರ ದಾಳಿಯಲ್ಲಿ ಧರ್ಮಶಾಲಾ ಮತ್ತು ಕಾಂಗ್ರಾ ಪ್ರದೇಶದ ಸೈನಿಕರು ವೀರಮರಣ ಹೊಂದಿದ್ದರು. ಆದ್ದರಿಂದ ಧರ್ಮಶಾಲಾದಲ್ಲಿ ಪಾಕ್ ಪಂದ್ಯ ಆಯೋಜಿಸುವುದು ವೀರಸೈನಿಕರಿಗೆ ಮಾಡುವ ಅವಮಾನ ಎಂದು ಟೀಕಿಸಿದ್ದವು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಒಂದು ಸಂಘಟನೆ ಯಂತೂ ಪಂದ್ಯ ನಡೆಯುವುದೇ ಖಚಿತವಾದರೆ ಪಿಚ್ ಅನ್ನು ಅಗೆದು ಹಾಕುವ ಬೆದರಿಕೆಯನ್ನೂ ಒಡ್ಡಿತ್ತು. ಭದ್ರತೆಯ ಪರಿಶೀಲನೆಗಾಗಿ ಪಾಕ್ ನಿಯೋಗವೂ ಬಂದು ಹೋಗಿತ್ತು.

‘ಪಂದ್ಯಕ್ಕೆ ಅಗತ್ಯವಾದ ಸರಂಜಾಮು ಗಳನ್ನು ಸಾಗಿಸಲು ಮತ್ತು ಭದ್ರತೆಯ ದೃಷ್ಟಿಯಿಂದ ಕೋಲ್ಕತ್ತ ಸೂಕ್ತ ಸ್ಥಳವಾಗಿದೆ. ಪಂದ್ಯದ ನೇರಪ್ರಸಾರ ಮಾಡುವ ಟಿವಿ ತಂಡ ಮತ್ತು ತಂತ್ರಜ್ಞರಿಗೂ ಕೋಲ್ಕತ್ತ ಅನುಕೂಲಕರ ಸ್ಥಳವಾಗಿದೆ’ ಎಂದು ಮೂಲಗಳು ತಿಳಿಸಿವೆ.
ಇಲ್ಲಿಗೆ ಮಂಗಳವಾರ ಭೇಟಿ ನೀಡಿದ್ದ ಪಾಕಿಸ್ತಾನದ ಮೂವರು ಅಧಿಕಾರಿಗಳ ನಿಯೋಗವು ಪಂದ್ಯವನ್ನು ಬೇರೆಡೆಗೆ ‘ಸ್ಥಳಾಂತರ’ ಮಾಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ವರದಿ ಸಲ್ಲಿಸಿತ್ತು. ಪಿಸಿಬಿಯು ಐಸಿಸಿಗೆ ಈ ಬಗ್ಗೆ ಮನವಿ ಸಲ್ಲಿಸಿತ್ತು. ಕೋಲ್ಕತ್ತ ಅಥವಾ ಮೊಹಾಲಿಯಲ್ಲಿ ಪಂದ್ಯ ನಡೆಸಬಹುದು ಎಂದು ಸಲಹೆ ನೀಡಿತ್ತು.

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಣ ಅಭ್ಯಾಸ ಪಂದ್ಯವು ಗುರುವಾರ ಕೋಲ್ಕತ್ತದಲ್ಲಿ ನಡೆಯಲಿದೆ. ಪಾಕಿಸ್ತಾನ ತಂಡವು ಮಾರ್ಚ್ 12ರಂದು ಬಂಗಾಳ ಮತ್ತು 14ರಂದು ಶ್ರೀಲಂಕಾ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಕಿಡಿ ಕಾರಿದ ಠಾಕೂರ್
ಐಸಿಸಿಯ ಈ ಕ್ರಮದಿಂದ ಬಿಸಿಸಿಐ ತೀವ್ರ ಮುಖಭಂಗ ಅನುಭವಿಸಿ ದಂತಾಗಿದೆ. ಮುಖ್ಯವಾಗಿ ಬಿಸಿಸಿಐ ಕಾರ್ಯದರ್ಶಿ, ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥ ಹಾಗೂ ಸಂಸದರೂ ಆಗಿರುವ ಅನುರಾಗ್ ಠಾಕೂರ್ ಅವರಿಗೆ ಇದರಿಂದ ತೀವ್ರ ಹಿನ್ನಡೆಯಾದಂತಾಗಿದೆ. ಅವರು ಹಿಮಾಚಲಪ್ರದೇಶ ಮುಖ್ಯಮಂತ್ರಿ ವೀರಭದ್ರಸಿಂಗ್ ವಿರುದ್ಧ ಕಿಡಿ ಕಾರಿದ್ದಾರೆ.

‘ನ್ಯಾಯಾಲಯವು ನಿರ್ದೇಶನ ನೀಡಿದ ನಂತರವೂ ಪಂದ್ಯಕ್ಕೆ ಸಂಪೂರ್ಣ ಭದ್ರತೆ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿಲ್ಲ. ಬೇರೆ ಯಾವ ರಾಜ್ಯದ ಮುಖ್ಯಮಂತ್ರಿಗಳೂ ಇಂತಹ ವರ್ತನೆಯನ್ನು ತೋರುವುದಿಲ್ಲ ಎಂಬುದು ನನ್ನ ಭಾವನೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಐಸಿಸಿ ಮತ್ತು ಪಿಸಿಬಿ ತಮ್ಮದೇ ಆದ ರೀತಿಯಲ್ಲಿ ಪರಿಶೀಲನೆ ನಡೆಸುತ್ತವೆ. ಆದರೆ, ರಾಜ್ಯ ಸರ್ಕಾರದಿಂದ ಖಚಿತ ಭರವಸೆ ಸಿಕ್ಕಿಲ್ಲ ಮತ್ತು ತಪ್ಪು ಸಂದೇಶ ನೀಡಲಾಗಿದೆ ಎನ್ನುವುದು ಈ ಬೆಳವಣಿಗೆಯಿಂದ ತಿಳಿಯುತ್ತದೆ. ಧರ್ಮಶಾಲಾದಲ್ಲಿ ನಡೆಯುವ ಮೊದಲ ಪಂದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ, ಪಾಕ್ ವಿರುದ್ಧದ ಪಂದ್ಯಕ್ಕೆ ಮಾತ್ರ ಈ ಸ್ಥಳ ಸೂಕ್ತ ಆಗದಿರುವುದು ಹೇಗೆ. ಇದು ರಾಜ್ಯ ಮತ್ತು ದೇಶದ ವರ್ಚಸ್ಸಿಗೆ ಕಳಂಕ ತಂದಿದೆ’ ಎಂದು ಠಾಕೂರ್ ಆಕ್ರೋಶವ್ಯಕ್ತಪಡಿಸಿದ್ದಾರೆ.

ಭರವಸೆ ಸಿಕ್ಕಿಲ್ಲ: ಖಾನ್
‘ಧರ್ಮಶಾಲಾ ಪಂದ್ಯಕ್ಕೆ ಸಂಪೂರ್ಣ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಹೇಳಿದ್ದಾರೆ. ಭಾರತ ಸರ್ಕಾರ ಕೂಡ ಈ ಬಗ್ಗೆ ಯಾವುದೇ ರೀತಿಯ ಭರವಸೆ ನೀಡಿಲ್ಲ. ಇಂತಹ ಸನ್ನಿವೇಶದಲ್ಲಿ ನಮ್ಮ ತಂಡವನ್ನು ಅಲ್ಲಿಗೆ ಕಳಿಸುವುದು ಹೇಗೆ?’ ಎಂದು ಪಿಸಿಬಿ ಮುಖ್ಯಸ್ಥ ಶಹರ್ಯಾರ್ ಖಾನ್ ಪ್ರಶ್ನಿಸಿದ್ದಾರೆ.

Write A Comment