ರಾಷ್ಟ್ರೀಯ

ಬೋಸ್‌ ಮಾರುವೇಷದ ಗುಮ್‌ನಾಮಿ ಬಾಬಾ ಭಂಡಾರದಲ್ಲಿ ಏನೇನಿದೆ ?

Pinterest LinkedIn Tumblr

netaji_bose
ಲಕ್ನೋ : ಕೆಚ್ಚೆದೆಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ನಿಗೂಢವಾಗಿ ಕಣ್ಮರೆಯಾದ ಬಳಿಕ ಮಾರು ವೇಷದಲ್ಲಿ ಸನ್ಯಾಸಿಯಂತೆ ಬಹಳ ಕಾಲ ಬದುಕಿದ್ದರು ಎಂಬ ವ್ಯಾಪಕ ಶಂಕೆಗೆ ಕಾರಣವಾಗಿದ್ದ “ಗುಮ್‌ನಾಮೀ ಬಾಬಾ’ ಅವರಿಗೆ ಸೇರಿದ್ದ ಭಂಡಾರದ ಕೆಲವು ಪೆಟ್ಟಿಗೆಗಳನ್ನು ಇಂದು ಫೈಜಾಬಾದ್‌ ಜಿಲ್ಲಾಡಳಿತವು ಭಾರೀ ಸಂಖ್ಯೆಯ ಕುತೂಹಲಿಗಳ ಸಮ್ಮುಖದಲ್ಲಿ ತೆರೆದು ನೋಡಿತು.

ಮೊದಲ ಸೆಟ್ಟಿನ ಈ ಪೆಟ್ಟಿಗೆಗಳಲ್ಲಿ ಎರಡನೇ ಮಹಾಯುದ್ಧದ ಕಾಲಘಟದಲ್ಲಿ ಜರ್ಮನಿಯಿಂದ ಉತ್ಪಾದಿತವಾದ ಒಂದು ಬೈನೋಕ್ಯುಲರ್‌ ಮತ್ತು ಬ್ರಿಟಿಷರ ಕಾಲದ ಎಂಪಾಯರ್‌ ಕೊರೋನಾ ಕ್ಲಾಸಿಕ್‌ ಪೋರ್ಟಬಲ್ ಟೈಪರೈಟರ್‌, ಹಳೇಕಾಲದ ಪೋರ್ಸೆಲಿನ್‌ ಟೀ ಸೆಟ್‌ ಹಾಗೂ ಅನೇಕ ಅಮೂಲ್ಯ ಪುಸ್ತಕಗಳು ಕಂಡು ಬಂದವು.

ಗುಮ್‌ನಾಮೀ ಬಾಬಾ ಅವರಿಗೆ ಸೇರಿದ ಭಂಡಾರವು ಸುಮಾರು 27 ಪೆಟ್ಟಿಗೆಗಳಲ್ಲಿ ಭದ್ರವಾಗಿದ್ದವು. ಈ ಪೈಕಿ ಕೆಲವು ಪೆಟ್ಟಿಗೆಗಳನ್ನು ಮಾತ್ರವೇ ಇಂದು ತೆರೆಯಲಾಗಿದೆ. ಈ ಪೆಟ್ಟಿಗೆಗಳಿಂದ ತೆಗೆಯಲಾಗಿರುವ ಎಲ್ಲ ವಸ್ತುಗಳನ್ನು ದಾಖಲೀಕರಿಸಿ ಅವುಗಳ ಫೋಟೋ ಮತ್ತು ವಿಡಿಯೋಗಳನ್ನು ಕೂಡ ತೆಗೆಯಲಾಗುವುದು ಎಂದು ಫೈಜಾಬಾದ್‌ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಯೋಗೇಶ್ವರ್‌ ರಾಮ್‌ ಮಿಶ್ರಾ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಗುಮ್‌ನಾಮೀ ಬಾಬಾ ಅವರಿಗೆ ಸೇರಿದ ನಿಗೂಢ ವಸ್ತುಗಳಿರುವ ಭಂಡಾರದ ಉಳಿದ ಪೆಟ್ಟಿಗೆಗಳನ್ನು ತೆರೆದು ನೋಡಲಾಗುವುದು ಮತ್ತು ಅವುಗಳಲ್ಲಿರುವ ಅಮೂಲ್ಯ ವಸ್ತುಗಳನ್ನು ಸಂಪೂರ್ಣವಾಗಿ ದಾಖಲೀಕರಿಸಿ ಸಂರಕ್ಷಿಸಿಡಲಾಗುವುದು ಎಂದು ಮಿಶ್ರಾ ಹೇಳಿದ್ದಾರೆ.

ಈಗ ಗುಮ್‌ನಾಮೀ ಬಾಬಾ ಅವರ ಭಂಡಾರವು ಫೈಜಾಬಾದ್‌ ಜಿಲ್ಲಾಡಳಿತೆಯ ಟ್ರೆಜರಿಯಲ್ಲಿ ಇದೆ.

ನಿಗೂಢ ಗುಮ್‌ನಾಮೀ ಬಾಬಾ ಅವರೇ ಕ್ರಾಂತಿಕಾರಿ ಹೋರಾಟಗಾರ ಸುಭಾಷ್‌ ಚಂದ್ರ ಬೋಸ್‌ ಆಗಿದ್ದರು. ಸರಕಾರ ಮತ್ತು ಪೊಲೀಸರ ಕೈಗೆ ಸಿಗದಂತೆ ಬೋಸ್‌ ಅವರು ಗುಮ್‌ನಾಮೀ ಬಾಬಾ ಮಾರು ವೇಷದಲ್ಲಿದ್ದರು ಎಂದು ಅನೇಕ ಸಂಶೋಧಕರು, ಇತಿಹಾಸಕಾರರು ಮತ್ತು ಪತ್ರಕರ್ತರು ನಂಬಿದ್ದಾರೆ.

ಹಾಗಿದ್ದರೂ ಗುಮ್‌ನಾಮೀ ಬಾಬಾ ತೀರಿಕೊಂಡಾಗ ಅವರ ಹಲ್ಲಿನ ಡಿಎನ್‌ಎ ಪರೀಕ್ಷೆ ನಡೆಸಲಾಗಿ ಸುಭಾಷ್‌ ಚಂದ್ರ ಬೋಸ್‌ ಅವರ ಡಿಎನ್‌ಎ ಜತೆಗೆ ಇದು ತಾಳೆಯಾಗದಿರುವುದು ಸಾಬೀತಾಗಿತ್ತು. ಹಾಗಾಗಿ ಗುಮ್‌ನಾಮೀ ಬಾಬಾ ಅವರು ಸುಭಾಷ್‌ ಚಂದ್ರ ಬೋಸ್‌ ಅಲ್ಲ ಎನ್ನುವುದು ವೈಜ್ಞಾನಿಕವಾಗಿ ದೃಢ ಪಟ್ಟಿತ್ತು.

-ಉದಯವಾಣಿ

Write A Comment