ರಾಷ್ಟ್ರೀಯ

ಮಹಿಳಾ ಮಸೂದೆ ಜಾರಿಗೊಳಿಸಿ; ಸರ್ಕಾರಕ್ಕೆ ಸೋನಿಯಾ ಪಟ್ಟು

Pinterest LinkedIn Tumblr

Sonaiನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ‘ಮಹಿಳಾ ಮೀಸಲಾತಿ ಮಸೂದೆ’ಯ ಜಾರಿಗೆ ಒತ್ತಾಯಿಸಲು ಬಳಸಿದರು.

ಮಹಿಳಾ ದಿನದ ಅಂಗವಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಲೋಕಸಭೆಯಲ್ಲಿ ಮಹಿಳಾ ವಿಷಯಗಳ ಕುರಿತು ಮಹಿಳೆಯರಿಗೆ ಮಾತನಾಡಲು ಮಂಗಳವಾರ ಅವಕಾಶ ನೀಡಿದರು.

ಈ ವೇಳೆ ಮಾತನಾಡಿದ ಸೋನಿಯಾ, ‘ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ’ ಘೋಷಣೆ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

‘ಗರಿಷ್ಠ ಆಡಳಿತ ಎಂಬುದು ಆರ್ಥಿಕ ಅಭಿವೃದ್ಧಿಗೆ ವೇಗ ನೀಡುವುದಕ್ಕಿಂತಲೂ ಹೆಚ್ಚಿನದು. ಪ್ರತೀಕಾರ ಅಥವಾ ಸೇಡನ್ನು ಆಹ್ವಾನಿಸದೇ ಭಿನ್ನಾಭಿಪ್ರಾಯದ ನೆಲೆಯನ್ನು ವಿಸ್ತರಿಸುವುದು ಅದರರ್ಥ’ ಎಂದರು.

‘ಮಹಿಳಾ ಹಕ್ಕುಗಳಿಗೆ ಸಂಬಂಧಿಸಿದಂತೆ ದ್ವಿಮುಖ ನೀತಿಗಳನ್ನು ಅನುಸರಿಸುವುದಂತೂ ನಿಶ್ಚಿತವಾಗಿಯೂ ‌ಗರಿಷ್ಠ ಆಡಳಿತದ ಅರ್ಥವಲ್ಲ. ದೀರ್ಘಾವಧಿಯಿಂದ ಬಾಕಿ ಉಳಿದಿರುವ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ಮೂಲಕ ನಮಗೆ–ಮಹಿಳೆಯರಿಗೆ ಕಾನೂನು ಬದ್ಧ ಬಾಕಿ ನೀಡುವುದು ನಿಜವಾದ ಗರಿಷ್ಠ ಆಡಳಿತ’ ಎಂದು ಅಭಿಪ್ರಾಯಪಟ್ಟರು.

‘ಇದಕ್ಕೆ ನಾವು ನಿಮ್ಮಿಂದ ಬಲವಾದ ಸಹಕಾರ ನಿರೀಕ್ಷಿಸುತ್ತೇವೆ’ ಎಂದು ಸ್ಪೀಕರ್ ಸುಮಿತ್ರಾ ಅವರನ್ನು ಉದ್ದೇಶಿಸಿ ಸೋನಿಯಾ ನುಡಿದರು.
ಸ್ಥಳೀಯ ಮಟ್ಟದಲ್ಲಿ ಚುನಾವಣೆಗೆ ವಿದ್ಯಾರ್ಹತೆ ನಿಗದಿ ಪಡಿಸಿರುವ ಹರಿಯಾಣ ಹಾಗೂ ರಾಜಸ್ತಾನದಂಥ ಬಿಜೆಪಿ ಆಡಳಿತದ ರಾಜ್ಯಗಳ ಕ್ರಮಕ್ಕೆ ಸೋನಿಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಂಥ ಕ್ರಮಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪ‍ಂಗಡ ಸಮುದಾಯದವರಿಗೆ ಸಂವಿಧಾನ ಬದ್ಧ ಹಕ್ಕು ನಿರಾಕರಿಸುತ್ತವೆ ಎಂದ ಅವರು, ‘ಶೀಘ್ರವೇ ತಿದ್ದುಪಡಿ’ಗೆ ಒತ್ತಾಯಿಸಿದರು.

Write A Comment