ಬದೌನ್ / ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್ ಅವರ ನಾಲಿಗೆ ಕತ್ತರಿಸಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೊಷಿಸಿದ ಬಿಜೆಪಿ ಯುವ ಮೋರ್ಚಾ ನಾಯಕ ಕುಲ್ ದೀಪ್ ವರ್ಷನಯ್ ಅವರನ್ನು ಬಿಜೆಪಿಯು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟನೆ ಮಾಡಿದೆ.
ಪಕ್ಷವು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಲ್ದೀಪ್ ವರ್ಷನಯ್ ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಶಾಕ್ಯ ಅವರು ಇಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ. ಕುಲ್ದೀಪ್ ಅವರ ವಿವಾದಾತ್ಮಕ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವೂ ಇಲ್ಲ ಎಂದು ಶಾಕ್ಯ ನುಡಿದರು.
ಕುಲ್ದೀಪ್ ಅವರ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ. ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ. ಪಕ್ಷದ ಪದಾಧಿಕಾರಿಗಳ ಒಪ್ಪಿಗೆ ಇಲ್ಲದೆ ಇಂತಹ ಹೇಳಿಕೆ ನೀಡಿದ್ದಕ್ಕಾಗಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ ಎಂದು ಶಾಕ್ಯ ಹೇಳಿದರು.
ನಾಲಿಗೆ ಕತ್ತರಿಸಿದರೆ 5 ಲಕ್ಷ ರೂ ಬಹುಮಾನ!
ನವದೆಹಲಿ ವರದಿ: ದೇಶದ್ರೋಹದ ಆರೋಪದಡಿ ಬಂಧಿಸಲ್ಪಟ್ಟಿದ್ದ ಜೆಎನ್ಯುು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ನಾಲಿಗೆಯನ್ನು ಕತ್ತರಿಸಿದರೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಬಿಜೆಪಿ ಯುವ ಘಟಕದ ನಾಯಕ ಕುಲ್ದೀಪ್ ಘೊಷಿಸಿದ್ದರು.
ಕನ್ಹಯ್ಯಾ ಆರ್ಎಸ್ಎಸ್ ಕುರಿತು ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುತ್ತಿದ್ದಾರೆ. ಕನ್ಹಯ್ಯಾ ಕುಮಾರ್ ಜೆಎನ್ಯುುನಲ್ಲಿ ವಿದ್ಯಾರ್ಥಿಗಳಿಗೆ ದೇಶದ ವಿರುದ್ಧ ಘೊಷಣೆ ಕೂಗುವಂತೆ ಪ್ರೇರೇಪಿಸಿದ್ದರು. ರಾಷ್ಟ್ರವಿರೋಧಿ ಕೂಗಿದ ಕನ್ಹಯ್ಯಾ ನಾಲಿಗೆಯನ್ನು ಕತ್ತರಿಸಿದರೆ ಅವರಿಗೆ ನಾನು 5 ಲಕ್ಷ ರೂ. ಬಹುಮಾನ ನೀಡುವುದಾಗಿ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಲ್ದೀಪ್ ಘೊಷಿಸಿದ್ದರು.
ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕನ್ಹಯ್ಯಾ ಕುಮಾರ್ ಜೆಎನ್ಯುುನಲ್ಲಿ ಮತ್ತೆ ಭಾಷಣ ಮಾಡಿದ್ದು, ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಎನ್ಡಿಎ ಸರ್ಕಾರ ಮತ್ತು ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜೆಎನ್ಯುು ವಿದ್ಯಾರ್ಥಿಗಳ ಧ್ವನಿಯನ್ನು ಉಡುಗಿಸಲು ಪ್ರಯತ್ನ ನಡೆಯುತ್ತಿದೆ ಎಂದು ಆಪಾದಿಸಿದ್ದರು.