ಮನೋರಂಜನೆ

ಇಂದು ಭಾರತ–ಪಾಕ್ ಕ್ರಿಕೆಟ್‌ ಹಣಾಹಣಿ: ದೋನಿ ಪಡೆಗೆ ಮತ್ತೊಂದು ಗೆಲುವಿನ ವಿಶ್ವಾಸ, ರೋಹಿತ್ ಮೇಲೆ ನಿರೀಕ್ಷೆ

Pinterest LinkedIn Tumblr

Indian and Pakistan cricket fans wave their national flags during an ICC Twenty20 Cricket World Cup Super Eight match between the two countries in Colombo, Sri Lanka, Sunday, Sept. 30, 2012. (AP Photo/Eranga Jayawardena)

ಮೀರ್‌ಪುರ: ಏಷ್ಯಾದ ಬಲಿಷ್ಠ ತಂಡಗಳೆನಿಸಿರುವ ಭಾರತ ಮತ್ತು ಪಾಕಿಸ್ತಾನ ನಡುವೆ ಶನಿವಾರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯ ನಡೆಯಲಿದ್ದು ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಚಿತ್ತ ಈ ಪಂದ್ಯದತ್ತ ನೆಟ್ಟಿದೆ.

ಏಷ್ಯಾಕಪ್‌, ವಿಶ್ವ ಕಪ್‌ ಹೀಗೆ ಯಾವುದೇ ಟೂರ್ನಿಯಾಗಿರಲಿ ಸಾಂಪ್ರ ದಾಯಿಕ ಎದುರಾಳಿಗಳ ನಡುವಿನ ಹೋರಾಟ ಸಹಜವಾಗಿ ಕುತೂಹಲಕ್ಕೆ ಕಾರಣವಾಗಿರುತ್ತದೆ. ‘ಏಷ್ಯಾಕಪ್‌ನಲ್ಲಿ ಪಾಕ್‌ ವಿರುದ್ಧ ಭಾರತವೇ ನೆಚ್ಚಿನ ತಂಡ’ ಎಂದು ಪಾಕಿಸ್ತಾನದ ಮಾಜಿ ನಾಯಕ ವಾಸೀಮ್ ಅಕ್ರಮ್‌ ಹೇಳಿರುವುದರಿಂದ ಕ್ರಿಕೆಟ್‌ ಪ್ರೇಮಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಭಾರತ ತಂಡ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶವನ್ನು 45 ರನ್‌ಗಳಿಂದ ಮಣಿಸಿತ್ತು. ಪಾಕಿಸ್ತಾನಕ್ಕೆ ಇದು ಮೊದಲ ಪಂದ್ಯ. ಉಭಯ ತಂಡಗಳು ಇದೇ ಕ್ರೀಡಾಂಗಣದಲ್ಲಿ 2014ರ ಏಷ್ಯಾಕಪ್‌ ನಲ್ಲಿ ಮುಖಾಮುಖಿ ಯಾಗಿದ್ದವು. ಆಗ ಭಾರತ ಸೋತಿತ್ತು. ಆದರೆ ಈಗ ಭಾರತ ಅತ್ಯಂತ ವಿಶ್ವಾಸದಲ್ಲಿದೆ. ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಮತ್ತು ಭರವಸೆಯ ಆಟಗಾರ ಹಾರ್ದಿಕ್‌ ಪಾಂಡ್ಯ ಹಿಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಶಿಖರ್ ಧವನ್‌, ವಿರಾಟ್‌ ಕೊಹ್ಲಿ, ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್‌ಗಳಾದ ಸುರೇಶ್ ರೈನಾ ಮತ್ತು ಯುವರಾಜ್‌ ಸಿಂಗ್ ಅವರು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲ ರಾಗಿದ್ದರು. ಆದ್ದರಿಂದ ಭಾರತ ಬ್ಯಾಟಿಂಗ್‌ ಸುಧಾರಣೆಗೆ ಒತ್ತು ಕೊಡಬೇಕಿದೆ.

ಬಾಂಗ್ಲಾ ಎದುರಿನ ಪಂದ್ಯದಲ್ಲಿ ಭಾರತದ ಬೌಲಿಂಗ್‌ ಚುರುಕಾಗಿತ್ತು. ಅನುಭವಿ ವೇಗಿ ಆಶಿಶ್‌ ನೆಹ್ರಾ, ಜಸ್‌ಪ್ರೀತ್‌ ಬೂಮ್ರಾ, ಹಾರ್ದಿಕ್‌ ಮತ್ತು ಸ್ಪಿನ್ನರ್‌ ಆರ್‌. ಅಶ್ವಿನ್‌ ಗಮನ ಸೆಳೆದಿದ್ದರು. ಇವರು ತಲಾ ನಾಲ್ಕು ಓವರ್‌ ಬೌಲಿಂಗ್ ಮಾಡಿ ತಲಾ 23 ರನ್‌ ನೀಡಿದ್ದರು.

ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ವಿಶ್ವ ಟ್ವೆಂಟಿ–20 ಟೂರ್ನಿಗೆ ಸಜ್ಜಾಗಲು ಉಭಯ ತಂಡಗಳಿಗೂ ಇದು ಕೊನೆಯ ಅವಕಾಶವಾಗಿದೆ. ವಿಶ್ವ ಟೂರ್ನಿಯಲ್ಲಿ ಈ ತಂಡಗಳು ಮೊದಲ ಪಂದ್ಯದಲ್ಲಿಯೇ ಮುಖಾಮುಖಿಯಾಗಲಿವೆ.

ವಿಶ್ವ ಟೂರ್ನಿಗೆ ಸಜ್ಜಾಗುವ ಸಲುವಾಗಿ ಭಾರತ ಈಗಾಗಲೇ ಕೆಲ ಪಂದ್ಯಗಳನ್ನು ಆಡಿದೆ. ಪಾಕ್ ತಂಡದ ಹಲವು ಆಟಗಾರರು ಪಾಕಿಸ್ತಾನ ಕ್ರಿಕೆಟ್‌ ಲೀಗ್‌ನಲ್ಲಿ (ಪಿಎಸ್‌ಎಲ್‌) ಆಡಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನದ ಎದುರು ಭಾರತ ತಂಡ ಒಮ್ಮೆಯೂ ಸೋತಿಲ್ಲ. ಆದರೆ ಟ್ವೆಂಟಿ–20ಯಲ್ಲಿ ಒಟ್ಟು ಹತ್ತು ಬಾರಿ ಮುಖಾಮುಖಿಯಾಗಿವೆ. ಎರಡೂ ತಂಡಗಳು ತಲಾ ಐದು ಪಂದ್ಯಗಳಲ್ಲಿ ಗೆಲುವು ಪಡೆದಿವೆ. ಾರತ ಮತ್ತು ಪಾಕ್ ತಂಡಗಳು ಬರೋಬ್ಬರಿ ಒಂದು ವರ್ಷ 11 ದಿನಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪೈಪೋಟಿ ನಡೆಸಿದ್ದವು. ಆಗ ಭಾರತ ಜಯ ಸಾಧಿಸಿತ್ತು.

ಮರಳಿದ ಅಮಿರ್‌: ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ಸಿಲುಕಿ ಏಳು ವರ್ಷ ಶಿಕ್ಷೆ ಅನುಭವಿಸಿರುವ ಎಡಗೈ ವೇಗಿ ಮಹಮ್ಮದ್‌ ಅಮೀರ್ ತಂಡಕ್ಕೆ ಮರಳಿದ್ದು ಪಾಕ್ ತಂಡದ ಬಲ ಹೆಚ್ಚಿಸಿದೆ. ಈ ಬೌಲರ್‌ ಹೋದ ತಿಂಗಳು ನ್ಯೂಜಿಲೆಂಡ್‌ ಎದುರಿನ ಏಕದಿನ ಸರಣಿಯಲ್ಲಿ ಆಡಿದ್ದರು. ಪಾಕ್ ಕೂಡ ಬಲಿಷ್ಠ ಆಟಗಾರರನ್ನು ಹೊಂದಿದೆ.

ತಂಡಗಳು ಇಂತಿವೆ:
ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಶಿಖರ್ ಧವನ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಸುರೇಶ್‌ ರೈನಾ, ಯುವರಾಜ್‌ ಸಿಂಗ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಆರ್‌್. ಅಶ್ವಿನ್‌, ಆಶಿಶ್‌ ನೆಹ್ರಾ, ಜಸ್‌ಪ್ರೀತ್‌ ಬೂಮ್ರಾ, ಅಜಿಂಕ್ಯ ರಹಾನೆ, ಪಾರ್ಥಿವ್ ಪಟೇಲ್‌, ಭುವನೇಶ್ವರ್‌ ಕುಮಾರ್‌ ಮತ್ತು ಹರಭಜನ್‌ ಸಿಂಗ್‌.

ಪಾಕಿಸ್ತಾನ: ಶಾಹಿದ್ ಅಫ್ರಿದಿ (ನಾಯಕ), ಮಹಮ್ಮದ್ ಹಫೀಜ್‌, ಶಾರ್ಜಿಲ್‌ ಖಾನ್‌, ಉಮರ್‌ ಅಕ್ಮಲ್‌, ಶೊಯಬ್‌ ಮಲಿಕ್‌, ಖುರ್ರಮ್‌ ಮಂಜೂರ್‌, ಮಹಮ್ಮದ್ ನವಾಜ್‌, ಸರ್ಫರಾಜ್‌ ಅಹ್ಮದ್, ಮಹಮ್ಮದ್ ಅಮೀರ್‌, ಮಹಮ್ಮದ್‌ ಇರ್ಫಾನ್‌, ಮಹಮ್ಮದ್ ಸಮಿ, ವಹಾಬ್‌ ರಿಯಾಜ್‌, ಅನ್ವರ್ ಅಲಿ, ಇಫ್ತಿಕಾರ್ ಅಹ್ಮದ್‌, ಇಮದ್‌ ವಾಸೀಮ್‌ ಮತ್ತು ಮಹಮ್ಮದ್‌ ಅಮೀರ್‌.
ಪಂದ್ಯ ಆರಂಭ: ರಾತ್ರಿ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

Write A Comment