ಚೆನ್ನೈ, ಫೆ.24- ತಮಿಳು ಬಾಂಧವರ ಪಾಲಿನ ಅಮ್ಮ, ನೆಚ್ಚಿನ ನಾಯಕಿ ಮುಖ್ಯಮಂತ್ರಿ ಜಯಲಲಿತಾಗೆ ಇಂದು 68ನೆ ಹುಟ್ಟುಹಬ್ಬದ ಸಂಭ್ರಮ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಸಾಕಷ್ಟು ರಾಜಕೀಯ ಏಳು-ಬೀಳುಗಳನ್ನು ಕಂಡಿರುವ ಜಯಲಲಿತಾ ಇಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳು, ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಂಡರು.
ಪ್ರಧಾನಮಂತ್ರಿ ನರೇಂದ್ರಮೋದಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕರು, ಪಕ್ಷದ ಕಾರ್ಯಕರ್ತರು ಅಮ್ಮನಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಜಯಲಲಿತಾ ಅವರ ಹುಟ್ಟುಹಬ್ಬದ ಪ್ರಯುಕ್ತ ಟ್ವಿಟ್ ಮಾಡಿರುವ ನರೇಂದ್ರಮೋದಿ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ಇನ್ನಷ್ಟು ಆರೋಗ್ಯ ಕರುಣಿಸಲಿ ಎಂದು ಆಶಿಸಿದ್ದಾರೆ.
ರಾಜ್ಯಾದ್ಯಂತ ಅಮ್ಮನ ನೆಚ್ಚಿನ ಅಭಿಮಾನಿಗಳು ವಿಶೇಷ ಪೂಜೆ, ಹೋಮ, ಹವನ ನಡೆಸಿ ಅಮ್ಮನಿಗೆ ಶುಭ ಕೋರಿದ್ದಾರೆ. ಇನ್ನು ರಾಜ್ಯದಲ್ಲಿರುವ ಸುಮಾರು ಏಳು ಸಾವಿರಕ್ಕೂ ಹೆಚ್ಚು ಹಿಂದೂ ದೇವಾಲಯಗಳಲ್ಲಿ ಜಯಲಲಿತಾ ಹುಟ್ಟುಹಬ್ಬಕ್ಕಾಗಿಯೇ ವಿಶೇಷ ಪೂಜೆ ನಡೆಸಲಾಗಿದೆ.