ನವದೆಹಲಿ (ಪಿಟಿಐ): ರಾಜ್ಯಸಭೆಯಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಹಾಗೂ ಲೋಕಸಭೆಯಲ್ಲಿ ಜೆಎನ್‌ಯು ವಿವಾದ ಬುಧವಾರ ಪ್ರತಿಧ್ವನಿಸಿದ್ದು, ಸಂಸತ್ತ್ ಅಧಿವೇಶದ ಕಾವು ಹೆಚ್ಚಿದೆ.
ರಾಜ್ಯಸಭೆ: ಚಿಂತಕರ ವೇದಿಕೆ ರಾಜ್ಯಸಭೆಯಲ್ಲಿ ಬುಧವಾರ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಅಬ್ಬರಿಸಿತು.
ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಕೇಂದ್ರ ಸಚಿವರ ರಾಜೀನಾಮೆಗೆ ಒತ್ತಾಯಿಸಿದ ಬಿಎಸ್‌ಪಿ ಸದಸ್ಯರು ಗದ್ದಲ ಸೃಷ್ಟಿಸಿದರು. ಇದರಿಂದ ಮಧ್ಯಾಹ್ನದ ತನಕ ಎರಡು ಬಾರಿ ಕಲಾಪ ಮುಂದೂಡಲಾಯಿತು.
ಈ ವಿಷಯದ ಸದನ ಕಾರ್ಯಸೂಚಿಯ ಚರ್ಚಾಪಟ್ಟಿಯಲ್ಲಿತ್ತು. ಅದಾಗ್ಯೂ, ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವರ ರಾಜೀನಾಮೆ ಬೇಡಿಕೆಗೆ ಕೂಡಲೇ ಸರ್ಕಾರ ಪ್ರತಿಕ್ರಿಯಿಸಬೇಕು ಎಂದು ಬಿಎಸ್‌ಪಿ ವರಿಷ್ಠೆ ಮಯಾವತಿ ಪಟ್ಟು ಹಿಡಿದರು.
ವಿಷಯದ ಚರ್ಚೆ ಬಳಿಕ ಸಂಬಂಧಿತ ಸಚಿವರು ಹೇಳಿಕೆ ನೀಡಲು ಸಿದ್ಧ ಎಂದು ಸರ್ಕಾರ ಹೇಳಿತು. ಆದರೆ, ಇದಕ್ಕೆ ಬಿಎಸ್‌ಪಿ ತೃಪ್ತರಾಗದ ಬಿಎಸ್‌ಪಿ ಸದಸ್ಯರು, ಉಪಸಭಾಧ್ಯಕ್ಷ ಪಿ.ಜೆ.ಕುರಿಯನ್ ಅವರ ಪೀಠದ ಎದುರು ಜಮಾಯಿಸಿ ಘೋಷಣೆ ಕೂಗುತ್ತ ಗದ್ದಲ ಸೃಷ್ಟಿಸಿದರು. ಮೊದಲಿಗೆ 10 ನಿಮಿಷಗಳ ಕಲಾಪ ಮುಂದೂಡಲಾಯಿತು. ಬಳಿಕ ಮಧ್ಯಾಹ್ನದ ತನಕ ಕಲಾಪ ಮುಂದೂಡಲಾಯಿತು.
ಲೋಕಸಭೆಯಲ್ಲಿ ಜೆಎನ್‌ಯು ‘ಬಿಸಿ’: ಇತ್ತ ಲೋಕಸಭೆಯಲ್ಲಿ ಜೆಎನ್‌ಯುವ ವಿವಾದ ಸಂಬಂಧ ನಿಲುವಳಿ ಮಂಡನೆಗೆ ಕಾಂಗ್ರೆಸ್ ನೋಟಿಸ್ ನೀಡಿದ್ದು, ಕಾವೇರಿದ ಚರ್ಚೆ ನಿರೀಕ್ಷಿಸಲಾಗಿದೆ.
ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ್ ಖರ್ಗೆ, ಜ್ಯೋತಿರಾದಿತ್ಯ ಸಿಂದಿಯಾ ಹಾಗೂ ಕೆ.ಸಿ.ವೇಣುಗೋಪಾಲ್ ಅವರು ನೋಟಿಸ್ ನೀಡಿದ್ದಾರೆ.