ಮುಂಬೈ: ತಮ್ಮ ಮುಂದಿನ ಚಿತ್ರ ‘ಫ್ಯಾನ್’ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಬಾಲಿವುಡ್ ಬಾದಶಾಃ ಶಾರುಕ್ ಖಾನ್ ದಂತಕತೆಗಳಾದ ಮಹಾತ್ಮ ಗಾಂಧಿ, ಯಶ್ ಚೋಪ್ರಾ, ರಜನಿಕಾಂತ್ ಮತ್ತು ಸಚಿನ್ ತೆಂಡುಲ್ಕರ್ ಅವರ ಬಗ್ಗೆ ತಮಗೆ ಅತಿ ಹೆಚ್ಚು ಹೆಮ್ಮ ಎಂದಿದ್ದಾರೆ.
“ಜಬ್ರ ಫ್ಯಾನ್” ಎಂಬ ತಮ್ಮ ಸಿನೆಮಾದ ಹಾಡನ್ನು ಹಿಂದಿ, ಭೋಜಪುರಿ, ಗುಜರಾತಿ, ಬೆಂಗಾಲಿ ಮತ್ತು ಪಂಜಾಬಿ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಮಾಡಿದ ೫೦ ವರ್ಷದ ನಟ ಈ ಮಾತುಗಳನ್ನು ಹೇಳಿದ್ದಾರೆ.
“ಪಂಜಾಬಿ ಸಂಸ್ಕೃತಿಯನ್ನು ಅಷ್ಟು ನಿಷ್ಕಲ್ಮಶವಾಗಿ ಯಶ್ ಜಿ ಅವರಿಗಿಂತಲೂ ಚೆನ್ನಾಗಿ ತೋರಿಸಿದವರು ಮತ್ತೊಬ್ಬರಿಲ್ಲ. ನಾನು ನಿಮ್ಮ ಅನಂತ ಅಭಿಮಾನಿ” ಎಂದು ಎಸ್ ಆರ್ ಕೆ ಯಶ್ ಚೋಪ್ರಾ ಬಗ್ಗೆ ಟ್ವೀಟ್ ಮಾಡಿ ಬೆಂಗಾಲಿ ಆವೃತ್ತಿಯ ಹಾಡನ್ನು ಹಂಚಿಕೊಂಡಿದ್ದಾರೆ.
“ರಜಿನಿ ಸರ್, ನಾನು ಸ್ಟಾರ್ ಅಲ್ಲ, ಆದರೆ ಸೂಪರ್ ಸ್ಟಾರ್ ರಜನಿ ತಲೈವ ಅವರ ಅಸಂಖ್ಯಾತ ಅಭಿಮಾನಿಗಳಲ್ಲಿ ಒಬ್ಬ” ಎಂದು ಕೂಡ ಅವರು ಬರೆದಿದ್ದಾರೆ.
ಕ್ರಿಕೆಟ್ ತಾರೆ ಸಚಿನ್ ತೆಂಡುಲ್ಕರ್ ಬಗ್ಗೆಯೂ ಬರೆದಿರುವ ಅವರು “ನನಗೆ ನೀವು ಎಂದಿಗೂ ಔಟ್ ಆಗುವುದಿಲ್ಲ. ನಾನು ನಿಮ್ಮ ಅಭಿಮಾನಿ. ಜೈ ಮಹಾರಾಷ್ಟ್ರ” ಎಂದಿದ್ದಾರೆ.
“ರಾಷ್ಟ್ರಪಿತ ಗಾಂಧೀಜಿ ವಿಶ್ವದ ಅತಿ ದೊಡ್ಡ ಸ್ಟಾರ್. ಇಡಿ ದೇಶ ಮತ್ತು ವಿಶ್ವ ಅವರ ಅಭಿಮಾನಿ” ಎಂದು ಹಾಡಿನ ಗುಜರಾತಿ ಆವೃತ್ತಿಯ ಬಗ್ಗೆ ಬರೆದುಕೊಳ್ಳುವಾಗ ಹೇಳಿದ್ದಾರೆ. ಮನೀಶ್ ಶರ್ಮಾ ನಿರ್ದೇಶನದ ‘ಫ್ಯಾನ್’ ಏಪ್ರಿಲ್ ೧೫ಕ್ಕೆ ಬಿಡುಗಡೆಯಾಗಲಿದೆ.