ರಾಷ್ಟ್ರೀಯ

ಪಟಿಯಾಲ ಕೋರ್ಟ್ ಹಾಲ್ ನಲ್ಲೇ ವಕೀಲರಿಂದ ಕನ್ಹಯ್ಯ ಕುಮಾರ್-ಪತ್ರಕರ್ತರ ಮೇಲೆ ದಾಳಿ

Pinterest LinkedIn Tumblr

kanhia-kumar-judicial

ನವದೆಹಲಿ (ಪಿಟಿಐ): ಸತತ ಎರಡನೇ ಬಾರಿಗೆ ಪಟಿಯಾಲ ಹೌಸ್ ಕೋರ್ಟ್‌ ಆವರಣದಲ್ಲಿ ವಕೀಲರ ವೇಷದಲ್ಲಿದ್ದ ಗುಂಪೊಂದು ಬುಧವಾರ ಮತ್ತೆ ಒಬ್ಬ ಪತ್ರಕರ್ತ ಹಾಗೂ ಒಬ್ಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದೆ.

ದೇಶದ್ರೋಹ ಆರೋಪ ಎದುರಿಸುತ್ತಿರುವ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರ ವಿಚಾರಣೆಗೆ ಮುನ್ನ ಈ ಘಟನೆ ನಡೆದಿದೆ.

ಫೆಬ್ರುವರಿ 15ರಂದು ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ನಡೆಸಿದ ವಕೀಲರಲ್ಲೊಬ್ಬನಾದ ವಿಕ್ರಮ್ ಚೌಹಾಣ್‌ ನೇತೃತ್ವದ ಗುಂಪು ಬುಧವಾರ ತ್ರಿವರ್ಣ ಧ್ವಜ ಹಾರಿಸುತ್ತ, ‘ವಂದೇ ಮಾತರಂ’ ಘೋಷಣೆ ಕೂಗುತ್ತಿತ್ತು.

ಪೊಲೀಸರ ಬಿಗಿ ಭದ್ರತೆಯ ನಡುವೆಯೂ ಸಂಘರ್ಷ ಉಂಟಾಯಿತು. ಕರ್ತವ್ಯದಲ್ಲಿದ್ದ ಪೊಲೀಸರು ಘೋಷಣೆ ಕೂಗುವವರನ್ನು ತಡೆಯಲಿಲ್ಲ. ಪತ್ರಕರ್ತರು, ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನೂ ತಡೆಯಲಿಲ್ಲ ಎಂದು ಪ್ರಮುಖ ಇಂಗ್ಲಿಷ್‌ ಸುದ್ದಿವಾಹಿನಿಯ ವರದಿಗಾರರೊಬ್ಬರು ದೂರಿದರು.

ಕಳೆದ ಸೋಮವಾರ ಕೂಡ ಇಂಥದ್ದೇ ಘಟನೆ ನಡೆದಿತ್ತು. ಪತ್ರಕರ್ತರು ಸೇರಿದಂತೆ ಆರು ಜನರು ಗಾಯಗೊಂಡಿದ್ದರು. ಈ ಕುರಿತು ಅರ್ಜಿ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌, ಜೆಎನ್‌ಯು ಪ್ರಕರಣ ವಿಚಾರಣೆಯ ವೇಳೆ ಸೂಕ್ತ ಭದ್ರತೆ ಕಲ್ಪಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತ್ತು.

ಜತೆಗೆ ಆಯ್ದ ವಕೀಲರು ಮತ್ತು ಪತ್ರಕರ್ತರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶ ನೀಡಿತ್ತು. ಅದಾಗ್ಯೂ, ಸುಪ್ರೀಂ ಕೋರ್ಟ್‌ ನಿರ್ದೇಶನದ ಹೊರತಾಗಿಯೂ ಈ ಘಟನೆ ನಡೆದಿದೆ.

Write A Comment