
ನವದೆಹಲಿ (ಪಿಟಿಐ): ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರ ಮೇಲಿನ ದೇಶದ್ರೋಹ ಆರೋಪಗಳ ಕುರಿತು ಬುಧವಾರವೂ ತೀವ್ರತರ ಚರ್ಚೆ ಮುಂದುವರೆದಿದೆ.
ಕನ್ಹಯ್ಯಾ ವಿರುದ್ಧ ‘ಸಮರ್ಪಕ ಪುರಾವೆಗಳಿವೆ’ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರು ತಿಳಿಸಿದ್ದಾರೆ. ಆದರೆ, ಕನ್ಹಯ್ಯಾ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ದೂರಿದ್ದಾರೆ.
ಬಸ್ಸಿ ಸಮರ್ಥನೆ: ‘ಆತನ ವಿರುದ್ಧ ನಮ್ಮಲ್ಲಿ ಸಮರ್ಪಕ ಪುರಾವೆಗಳಿವೆ’ ಎಂದು ಕನ್ಹಯ್ಯಾ ಅವರನ್ನು ದೇಶದ್ರೋಹ ಆರೋಪದಡಿ ಬಂಧಿಸಿರುವ ಕ್ರಮವನ್ನು ಬಸ್ಸಿ ಅವರು ಸಮರ್ಥಿಸಿಕೊಂಡರು.
ಬುಧವಾರ ಪ್ರಧಾನಿ ಕಚೇರಿಯ ಹೊರಗೆ ಬಸ್ಸಿ ಅವರು ಕನ್ಹಯ್ಯಾ ಅವರು ದೇಶ ವಿರೋಧಿ ಘೋಷಣೆ ಕೂಗಿರಲಿಕ್ಕಿಲ್ಲ ಎಂಬ ಭದ್ರತಾ ಸಂಸ್ಥೆಗಳ ವರದಿಗಳ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಇದೇ ವೇಳೆ, ಕನ್ಹಯ್ಯಾ ಅವರಿಗೆ ಕ್ಲೀನ್ಚಿಟ್ ನೀಡುವುದಿಲ್ಲವೇ ಎಂಬ ಪ್ರಶ್ನೆಗೆ ‘ಇಲ್ಲವೇ ಇಲ್ಲ’ ಎಂದು ಉತ್ತರಿಸಿದರು.
ವಕಾಲತ್ತಿಗೆ ಸಿದ್ಧ: ಇನ್ನು, ಕನ್ಹಯ್ಯಾ ಕುಮಾರ್ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ದೂರಿರುವ ಖ್ಯಾತ ವಕೀಲ ಭೂಷಣ್, ಅಗತ್ಯ ಕಂಡರೆ ನ್ಯಾಯಾಲಯದಲ್ಲಿ ಅವರ ಪರ ವಕಾಲತ್ತಿಗೆ ಸಿದ್ಧ ಎಂದಿದ್ದಾರೆ.
‘ಕುಮಾರ್ ಪರವಾಗಿ ವಕಾಲತ್ತಿಗೆ ನಾನು ಸಿದ್ಧ. ನಾನು ಸಾಮಾನ್ಯವಾಗಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ನಲ್ಲಿ ನಿರತವಾಗಿರುತ್ತೇನೆ. ಆದರೆ, ಅಗತ್ಯ ಬಿದ್ದರೇ ಅವರ ಪರವಾಗಿ ವಕಾಲತ್ತು ವಹಿಸುವೆ. ಏಕೆಂದರೆ ಅವರೊಬ್ಬರ ಉತ್ಕೃಷ್ಟ ವಿದ್ಯಾರ್ಥಿ ನಾಯಕ’ ಎಂದು ಬಣ್ಣಿಸಿದ್ದಾರೆ.
ಸಿನ್ಹಾ ಬೆಂಬಲ: ಮತ್ತೊಂದೆಡೆ, ಬಿಜೆಪಿ ಹಿರಿಯ ನಾಯಕತ್ವವನ್ನು ಆಗಾಗ ಟೀಕಿಸುವ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು ಕೂಡ ಬಂಧಿತ ಕನ್ಹಯ್ಯಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
‘ಕನ್ಹಯ್ಯಾ ಶೀಘ್ರ ಬಿಡುಗಡೆಯನ್ನು ಬಯಸುವ ಜತೆಗೆ ಅದಕ್ಕಾಗಿ ಪ್ರಾರ್ಥಿಸುವೆ. ಆತನ ಭಾಷಣದ ಲಿಪ್ಯಂತರವನ್ನು ಆಲಿಸಿರುವೆ. ಆತ ದೇಶ ವಿರೋಧಿ ಅಥವಾ ಸಂವಿಧಾನ ವಿರುದ್ಧ ಏನೂ ಹೇಳಿಲ್ಲ’ ಎಂದು ಸಿನ್ಹಾ ಅವರು ಟ್ವೀಟ್ ಮಾಡಿದ್ದಾರೆ.