ನವದೆಹಲಿ: ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಹನುಮಂತನ ಚಿತ್ರ ಇರುವ ಪೋಸ್ಟರ್ ಒಂದನ್ನು ಟ್ವೀಟ್ ಮಾಡಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿವಾದಕ್ಕೆ ಸಿಲುಕಿದ್ದಾರೆ.
ಹನುಮಂತನ ಚಿತ್ರ ಇರುವ ಪೋಸ್ಟರ್ ಟ್ವೀಟ್ ಮಾಡಿದ ಹಿನ್ನಲೆಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ದೂರು ದಾಖಲಾಗಿದೆ. ಭಾರತೀಯ ಜನತಾ ಪಕ್ಷದ ಪರ ವಕೀಲ ಕೆ ಕರುಣಾ ಸಾಗರ್ ಅರವಿಂದ್ ಕೇಜ್ರಿವಾಲ್ ವಿರುದ್ಧ ದೂರು ನೀಡಿದ್ದಾರೆ. ಕೇಜ್ರಿವಾಲ್ ಅವರು ಟ್ವೀಟ್ ಮಾಡಿರುವ ವ್ಯಂಗ್ಯಚಿತ್ರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತದ್ದು, ಹಾಗಾಗಿ, ಕೇಜ್ರಿವಾಲ್ ವಿರುದ್ಧ ಇಂಡಿಯನ್ ಪೆನಲ್ ಕೋಡ್ ಸೆಕ್ಷನ್ 295ಎ ಮತ್ತು 153ಎ ಅಡಿ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.
ಹನುಮಂತ ಲಂಕೆಗೆ ಬೆಂಕಿ ಹಚ್ಚಿ ಬರುವಂತಹ ದೃಶ್ಯವನ್ನು ಇಟ್ಟುಕೊಂಡು ವ್ಯಂಗ್ಯ ಚಿತ್ರ ರಚಿಸಲಾಗಿದೆ. ಇದರಲ್ಲಿ “ಎಲ್ಲ ಕೆಲಸ ಮಾಡಿ ಮುಗಿಸಿದ್ದೇನೆ ಸರ್, ಈಗ ಎಲ್ಲರ ಚಿತ್ತ ಜೆಎನ್ ಯು ಕಡೆ ನೆಟ್ಟಿದೆ(“Done Sir, all attention is on JNU now” ). ಈ ಗಲಾಟೆಯಲ್ಲಿ ಉಳಿದ ವಿಚಾರಗಳು ಯಾರ ತಲೆಗೂ ಹೋಗುವುದಿಲ್ಲ ಎಂಬ ಮಾತನ್ನು ಪ್ರತಿಬಿಂಬಿಸುತ್ತಿದ್ದು, ಮೇಕ್ ಇನ್ ಇಂಡಿಯಾ ಎದುರಿಗೆ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಎದುರು ಬರುವ ಹನುಮಂತನ ವೇಷದ ರಾಕ್ಷಸ ಹೇಳುವಂತೆ ಚಿತ್ರವೊಂದನ್ನು ರಚಿಸಲಾಗಿದೆ.