ನವದೆಹಲಿ: ಉಗ್ರರ ಸುರಕ್ಷಿತ ತಾಣ ಪಾಕಿಸ್ತಾನಕ್ಕೆ 265 ದಶಲಕ್ಷ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ 860 ದಶಲಕ್ಷ ಡಾಲರ್ ಮೊತ್ತದ ಆರ್ಥಿಕ ನೆರವು ನೀಡದಂತೆ ಅಮೆರಿಕಕ್ಕೆ ಭಾರತ ಶುಕ್ರವಾರ ಕೇಳಿಕೊಂಡಿದೆ.
ಪಾಕಿಸ್ತಾನದ್ದೆ ಅಮೆರಿಕ 860 ಮಿಲಿಯನ್ ಡಾಲರ್ ನೆರವು ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು, ಈ ಬಗ್ಗೆ ನಾವು ನಮ್ಮ ನಿಲವು ಸ್ಪಷ್ಟಪಡಿಸಿದ್ದೇವೆ. ಅಮೆರಿಕ ನೀಡುವ ಈ ನೆರವನ್ನು ಪಾಕಿಸ್ತಾನ ನೇರವಾಗಿ ಭಾರತದ ವಿರುದ್ಧದ ಉಗ್ರ ಕೃತ್ಯಗಳಿಗೆ ಬಳಸಿಕೊಳ್ಳಲಿದೆ ಎಂದು ನಾವು ನಂಬಿದ್ದೇವೆ. ಹೀಗಾಗಿ ಆರ್ಥಿಕ ನೆರವು ನೀಡಬೇಡಿ ಎಂದು ಅಮೆರಿಕಕ್ಕೆ ಕೇಳಿಕೊಳ್ಳುತ್ತೇವೆ ಎಂದರು,
ಕಳೆದ ಬುಧವಾರ ಪಾಕಿಸ್ತಾನಕ್ಕೆ ನೆರವು ಘೋಷಿಸಿದ್ದ ಅಮೆರಿಕ, ಉಗ್ರನಿಗ್ರಹಕ್ಕಾಗಿ ಈ ನಿಧಿ ನೀಡುತ್ತಿರುವುದಾಗಿ ಹೇಳಿಕೊಂಡಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಬಜೆಟ್ ಪ್ರಸ್ತಾವದಲ್ಲಿ ಪಾಕ್ಗೆ ನೆರವು ನೀಡುವ ಬಗ್ಗೆ ಉಲ್ಲೇಖವಿಲ್ಲದಿದ್ದರೂ, ವಿದೇಶಾಂಗ ಸಚಿವ ಜಾನ್ ಕೆರ್ರಿ ಈ ಕೊಡುಗೆಯನ್ನು ಪ್ರಕಟಿಸಿದ್ದರು.
ಈ ಮಿಲಿಟರಿ ಅನುದಾನವನ್ನು ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಟಕ್ಕೆ, ತನ್ನ ಅಣು ಸ್ಥಾವರ ಮತ್ತು ಶಸ್ತ್ರಾಸ್ತ್ರಗಳ ರಕ್ಷಣೆ ಮತ್ತು ಭಾರತದೊಂದಿಗಿನ ಬಾಂಧವ್ಯ ವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಅಮೆರಿಕ ಸೂಚಿಸಿದೆ. ಜತೆಗೆ ಪಾಕಿಸ್ತಾನ ಉತ್ತಮ ಮಿತ್ರ ರಾಷ್ಟ್ರವಾಗಿದ್ದು, ಉಗ್ರನಿಗ್ರಹದಂಥ ಚಟುವಟಿಕೆಗಳಲ್ಲಿ ಸಹಕಾರ ನೀಡುತ್ತಿದೆ ಎಂದು ಅಮೆರಿಕ ಬಣ್ಣಿಸಿತ್ತು.