ರಾಷ್ಟ್ರೀಯ

ನ್ಯಾಷನಲ್ ಹೆರಾಲ್ಡ್ ಹಗರಣ: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸೋನಿಯಾ, ರಾಹುಲ್

Pinterest LinkedIn Tumblr

sonia-rahul-gandhi-620-2wvSSನವದೆಹಲಿ(ಫೆ. 04): ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ದಿಲ್ಲಿ ಹೈಕೋರ್ಟ್’ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಟ್ರಯಲ್ ಕೋರ್ಟ್’ನಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ವಿಚಾರಣೆಯನ್ನು ನಿಲ್ಲಿಸಲು ಸೋನಿಯಾ ಮತ್ತಿತರರು ಮಾಡಿಕೊಂಡಿದ್ದ ಮನವಿಯನ್ನು ದಿಲ್ಲಿ ಹೈಕೋರ್ಟ್ ತಿರಸ್ಕರಿಸಿ, ಕೆಳನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿತ್ತು. ಉಚ್ಚ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಇವರು ಈಗ ಸರ್ವೋಚ್ಚ ನ್ಯಾಯಾಲಯದ ಮೊರೆಹೋಗಿದ್ದಾರೆ.

ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಕೆಳ ನ್ಯಾಯಾಲಯದ ವಿಚಾರಣೆ ವೇಳೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಹೈಕೋರ್ಟ್ ತೀರ್ಪನ್ನು ಅಳಿಸಿಹಾಕಬೇಕೆಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮನವಿ ಮಾಡಿಕೊಂಡಿದ್ದಾರೆನ್ನಲಾಗಿದೆ. ಜೊತೆಗೆ, ಸುಪ್ರೀಂಕೋರ್ಟ್’ನಲ್ಲಿ ವಿಶೇಷ ಲೀವ್ ಪೆಟಿಶನ್ ಕೂಡ ದಾಖಲಿಸಿದ್ದಾರೆ.

ಸ್ವಾಮಿ ಚಾಲೆಂಜ್…
ಕಾಂಗ್ರೆಸ್ ಮುಖಂಡರು ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತಿದ್ದಂತೆಯೇ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಕೆವಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಆಗಿರುವ ಅವ್ಯಹಾರದ ಮೊತ್ತವು ಈಗಿನ ಬೆಲೆಯಲ್ಲಿ 5 ಸಾವಿರ ಕೋಟಿ ರೂ.ನಷ್ಟಿದೆ ಎಂದು ತಮ್ಮ ದೂರಿನಲ್ಲಿ ಪ್ರಸ್ತಾಪಿಸಿರುವ ಸ್ವಾಮಿ, ತನ್ನ ವಾದವನ್ನು ಆಲಿಸದೆಯೇ ಕಾಂಗ್ರೆಸ್ ಮುಖಂಡರ ಪರವಾಗಿ ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸದಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಏನಿದು ಪ್ರಕರಣ..?
ಎಜೆಎಲ್ ಒಡೆತನದಲ್ಲಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಆಸ್ತಿಯನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಕ್ರಮವಾಗಿ ಕಬಳಿಸಿದ್ದಾರೆ ಎಂಬುದು ಸುಬ್ರಮಣಿಯನ್ ಸ್ವಾಮಿಯವರ ಆರೋಪವಾಗಿದೆ. ನಷ್ಟದಲ್ಲಿದ್ದ ಎಜೆಎಲ್’ಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಬಡ್ಡಿಯಿಲ್ಲದೇ 90 ಕೋಟಿ ರೂ ಸಾಲ ಕೊಡಿಸಲಾಗುತ್ತದೆ. ಬಳಿಕ ಈ ಸಾಲದ ಜವಾಬ್ದಾರಿಯನ್ನು ಸೋನಿಯಾ ಮತ್ತು ರಾಹುಲ್ ಒಡೆತನದ ಯಂಗ್ ಇಂಡಿಯಾ ಸಂಸ್ಥೆಗೆ ವರ್ಗ ಮಾಡಲಾಯಿತು. ಸಾಲವನ್ನು ತೀರಿಸಲು ಎಜೆಎಲ್’ಗೆ ಸಾಧ್ಯವಾಗದಿದ್ದಾಗ ಅದರ ಅಮೂಲ್ಯ ಆಸ್ತಿಗಳನ್ನು ಯಂಗ್ ಇಂಡಿಯಾಗೆ ನೀಡಲಾಗಿದೆ. ನ್ಯಾಷನಲ್ ಹೆರಾಲ್ಡ್ ಹೆಸರಿನಲ್ಲಿರುವ ಭೂ ಆಸ್ತಿಗಳು ಈಗಿನ ಕಾಲಕ್ಕೆ ಬಹಳ ಬೆಲೆ ಹೊಂದಿವೆ. ಈ ಆಸ್ತಿಯನ್ನು ಹೊಡೆಯಲು ಗಾಂಧಿ ಕುಟುಂಬದವರು ಕ್ರಿಮಿನಲ್ ಸಂಚು ರೂಪಿಸಿದ್ದರು ಎಂಬುದು ಸುಬ್ರಮಣಿಯನ್ ಸ್ವಾಮಿಯವರ ಪ್ರಮುಖ ಆರೋಪ.

Write A Comment