ನವದೆಹಲಿ(ಪಿಟಿಐ): ಬೆಂಗಳೂರಿನಲ್ಲಿ ತಾಂಜಾನಿಯಾ ಮೂಲದ ವಿದ್ಯಾರ್ಥಿನಿ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಪ್ರಕರಣ ಕುರಿತು ತಕ್ಷಣ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಆಯೋಗದ ಸದಸ್ಯೆ ಸುಷ್ಮಾ ಶಾಹು ಅವರು, ಈ ಘಟನೆ ರಾಷ್ಟ್ರಕ್ಕೆ ಆಗಮಿಸುವ ವಿದೇಶಿ ಪ್ರಜೆಗಳಿಗೆ ಇಲ್ಲಿರುವ ಭದ್ರತೆ ಮತ್ತು ಸುರಕ್ಷತೆ ಬಗ್ಗೆ ವಿಶ್ವದಾದ್ಯಂತ ತಪ್ಪು ಸಂದೇಶ ರವಾನಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಘಟನೆ ಬಳಿಕ ಕೇಂದ್ರ ಸರ್ಕಾರ, ಗೃಹ ಸಚಿವಾಲಯ ಸೇರಿದಂತೆ ಕಾಂಗ್ರೆಸ್ ವರಿಷ್ಠರೂ ಪ್ರಕರಣದ ಬಗ್ಗೆ ವಿವರವಾದ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೇಳಿದ್ದಾರೆ.
ಘಟನೆ: ಜ. 31ರ ರಾತ್ರಿ ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿ ನಡೆದ ಅಪಘಾತದ ಸ್ಥಳವನ್ನು ಹಾದು ಹೋದ ತಾಂಜಾನಿಯಾ ವಿದ್ಯಾರ್ಥಿನಿಯ ಬಟ್ಟೆಬಿಚ್ಚಿ ನಗ್ನಗೊಳಿಸಿ ದೌರ್ಜನ್ಯ ನಡೆಸಲಾಗಿತ್ತು.