ರಾಷ್ಟ್ರೀಯ

ತಾಂಜಾನಿಯಾ ವಿದ್ಯಾರ್ಥಿನಿಗೆ ದೌರ್ಜನ್ಯ: ರಾಜ್ಯದಿಂದ ವರದಿ ಕೇಳಿದ ಕೇಂದ್ರ

Pinterest LinkedIn Tumblr

Sid+Rajನವದೆಹಲಿ/ ಬೆಂಗಳೂರು(ಪಿಟಿಐ): ತಾಂಜಾನಿಯಾ ಮೂಲದ ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ ಪ್ರಕರಣ ರಾಜ್ಯದ ಆಚೆಗೂ ತೀವ್ರ ಚರ್ಚೆಗೆ ಗ್ರಾಸ ಒದಗಿಸಿದೆ.

ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಈ ಸಂಬಂಧ ಕರ್ನಾಟಕ ಸರ್ಕಾರದಿಂದ ಗುರುವಾರ ವರದಿ ಕೇಳಿದೆ. ಮತ್ತೊಂದಡೆ, ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದಿರುವ ರಾಜ್ಯ ಸರ್ಕಾರ, ಇದೊಂದು ‘ಜನಾಂಗೀಯ’ ದೌರ್ಜನ್ಯ ಎಂಬ ಆರೋಪವನ್ನು ಅಲ್ಲಗಳೆದಿದೆ.

ವಿವರಣಾತ್ಮಕ ವರದಿ ನೀಡಿ: ತಾಂಜಾನಿಯಾ ಯುವತಿಯ ಮೇಲೆ ದೌರ್ಜನ್ಯ ನಡೆಯಲು ಕಾರಣವಾದ ಸನ್ನಿವೇಶ ಹಾಗೂ ‌ಆರೋಪಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ವಿವರಣಾತ್ಮಕ ವರದಿ ನೀಡುವಂತೆ ಕೇಂದ್ರ ಗೃಹ ಇಲಾಖೆಯು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ವಿದೇಶಿ ಪ್ರಜೆ ಮೇಲೆ ನಡೆದ ಪ್ರಕರಣ ಇದಾಗಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಾಧ್ಯವಾದಷ್ಟು ಶೀಘ್ರವೇ ವರದಿ ಸಲ್ಲಿಸುವಂತೆಯೂ ಅದು ಹೇಳಿದೆ.

ವಿಚಾರಣೆಗೆ ಸೂಚಿಸಿರುವೆ: ಈ ಸಂಬಂಧ ‘ಇನ್ವೆಸ್ಟ್ ಕರ್ನಾಟಕ–2016’ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗಾರರೊಟ್ಟಿಗೆ ಮಾತನಾಡಿದರು.

‘ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಸುಷ್ಮಾ ಸ್ವರಾಜ್ ಅವರು ನನ್ನೊಟ್ಟಿಗೆ ಮಾತನಾಡಿದ್ದಾರೆ. ಮುಖ್ಯ ಕಾರ್ಯದರ್ಶಿಯ ಮೂಲಕ ನಾನು ಅವರಿಗೆ ವರದಿ ಕಳುಹಿಸುತ್ತಿರುವೆ’ ಎಂದರು.

ಇದೇ ವೇಳೆ, ಸಂತ್ರಸ್ತ ನೀಡಿದ ದೂರು ದಾಖಲಿಸಿಕೊಳ್ಳಲು ವಿಳಂಬ ಆಗಿದ್ದೇಕೆ ಎಂಬುದನ್ನು ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದೂ ಅವರು ತಿಳಿಸಿದರು.

ಪರಮೇಶ್ವರ್ ನಕಾರ: ಮತ್ತೊಂದೆಡೆ, ಈ ಪ್ರಕರಣ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್, ‘ಸಂತ್ರಸ್ತೆಯನ್ನು ನಗ್ನಗೊಳಿಸಿ ದೌರ್ಜನ್ಯ ನಡೆಸಿದ ಆರೋಪ’ವನ್ನು ಅಲ್ಲಗಳೆದರು. ಅಲ್ಲದೇ ‘ಇದು ನಿಶ್ಚಿತವಾಗಿಯೂ ಜನಾಂಗೀಯ ದಾಳಿಯಲ್ಲ’ ಎಂದು ಸ್ಪಷ್ಟಪಡಿಸಿದರು.

ವರದಿ ಕೇಳಿದ ರಾಹುಲ್: ಮತ್ತೊಂದು ಬೆಳವಣಿಗೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಕರಣ ಸಂಬಂಧ ವರದಿ ನೀಡುವಂತೆ ಪಕ್ಷಕ್ಕೆ ಸೂಚಿಸಿದ್ದಾರೆ. ಈ ವಿಷಯವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

ಏನಿದು ಘಟನೆ?: ಜ.31 ರ ರಾತ್ರಿ ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿ ನಡೆದ ಅಪಘಾತದ ಸ್ಥಳವನ್ನು ಹಾದು ಹೋದ ತಾಂಜಾನಿಯಾ ವಿದ್ಯಾರ್ಥಿನಿಯ ಬಟ್ಟೆಬಿಚ್ಚಿ ನಗ್ನಗೊಳಿಸಿ ದೌರ್ಜನ್ಯ ನಡೆಸಲಾಗಿತ್ತು.

Write A Comment