ನಾಡಿಯಾ: 15 ತಿಂಗಳುಗಳ ಹಿಂದೆ ಮಹಿಳೆಗೆ ಸೇರಿದ ಖಾಲಿ ಜಾಗವನ್ನು ಅಕ್ರಮವಾಗಿ ಕಿತ್ತುಕೊಳ್ಳಲು ಮಹಿಳೆಯ ಕೊಲೆ ಮಾಡಿದ್ದ 11 ಮಂದಿಗೆ ಪಶ್ಚಿಮ ಬಂಗಾಳ ನ್ಯಾಯಾಲಯವೊಂದು ಮರಣ ದಂಡನೆ ವಿಧಿಸಿದೆ.
ಅಪರ್ಣಾ ಬಾಗ್(38) ಎಂಬ ಗೃಹಿಣಿಗೆ ಸೇರಿದ ನಾಡಿಯಾ ಜಿಲ್ಲೆಯ ಕೃಷ್ಣ್ಣಂಜ್ನ ಖಾಲಿ ಜಾಗವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದ ಆರೋಪಿಗಳು ತಮ್ಮನ್ನು ವಿರೋಧಿಸಿದ್ದ ಅಪರ್ಣಾ ಅವರನ್ನು 2015ರ ನವೆಂಬರ್ 23ರಂದು ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಘಟನೆಯಲ್ಲಿ ಅಪರ್ಣಾಳಿಗೆ ಸಹಾಯ ಮಾಡಲು ಬಂದಿದ್ದ ಇಬ್ಬರ ಮೇಲೂ ಗುಂಡಿನ ದಾಳಿ ನಡೆದಿತ್ತು ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.
ಆರೋಪಿಗಳ ಪೈಕಿ ಇನ್ನೊಬ್ಬ ತಲೆಮರಿಸಿಕೊಂಡಿದ್ದಾನೆ. ಪ್ರಕರಣದ ಪ್ರಮುಖ ಆರೋಪಿ ಲಂಕೇಶ್ವರ್ ಘೊಷ್ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಾಯಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.