ಹೊಸದಿಲ್ಲಿ: ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಹೆಸರನ್ನು ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ನಾಮಾಂಕನ ಮಾಡಲಾಗಿದೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಈ ವರ್ಷದ ನೊಬೆಲ್ ಪ್ರಶಸ್ತಿಯ ನಾಮ ನಿರ್ದೇಶನ ಪ್ರಕ್ರಿಯೆ ಇದೇ ಫೆಬ್ರವರಿ 1ಕ್ಕೆ ಕೊನೆಗೊಂಡಿದೆ. ಈ ವರ್ಷ ಅಕ್ಟೋಬರ್ ಸುಮಾರಿಗೆ ನೊಬೆಲ್ ಪ್ರಶಸ್ತಿ ಪ್ರಕಟಗೊಳ್ಳಲಿದೆ.
ಈ ವರ್ಷ ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಎಂದೋ ಸಿಕ್ಕಿರಬೇಕಾಗಿತ್ತು ಎಂದು ಅವರ ಅಭಿಮಾನಿಗಳು, ಅನುಯಾಯಿಗಳು ಮತ್ತು ಭಕ್ತರು ಭಾವಿಸುತ್ತಾರೆ.
ಥಾಮ್ಸನ್ ರಾಯ್ಟರ್ ಫೌಂಡೇಶನ್ ಇದೇ ಫೆಬ್ರವರಿ 1ರಂದು ಪ್ರಕಟಿಸಿರುವ ತನ್ನ ಬ್ಲಾಗ್ ನಲ್ಲಿ ಹೇಳಿರುವುದನ್ನು ಉಲ್ಲೇಖೀಸಿ ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಥಾಮ್ಸನ್ ಬ್ಲಾಗ್ ಹೀಗೆ ಹೇಳಿದೆ : ನಾರ್ವೆಯ ನೊಬೆಲ್ ಸಂಸ್ಥೆಯು ಪ್ರಶಸ್ತಿಗೆ ನಾಮಾಂಕನಗೊಂಡಿರುವವರ ಹೆಸರನ್ನು ಪ್ರಕಟಿಸುವುದಿಲ್ಲ. ಆದರೆ ನೊಬೆಲ್ ವೀಕ್ಷಕರು ಹೇಳಿರುವ ಪ್ರಕಾರ ಅಮೆರಿಕದ ಬೇಹುಗಾರಿಕೆ ಸಂಸ್ಥೆಯ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ಮತ್ತು ಕೊಲಂಬಿಯದಲ್ಲಿ ಶಾಂತಿ ಮಾತುಕತೆ ನಡೆಸಿರುವವರನ್ನು ನಾಮಾಂಕನ ಮಾಡಲಾಗಿದೆ’.
ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಕೊಲಂಬಿಯಾದಲ್ಲಿ ಶಾಂತಿ ಮರುಸ್ಥಾಪಿಸಲು ಯತ್ನಿಸುವಲ್ಲಿ ಮುಖ್ಯ ಪಾತ್ರ ವಹಿಸಿರುವುದು ಗಮನಾರ್ಹವಾಗಿದೆ. ಗುರೂಜಿ ಅವರು ತಮ್ಮ ಕ್ಯೂಬಾ ಪ್ರವಾಸದ ವೇಳೆ ಲ್ಯಾಟಿನ್ ಅಮೆರಿಕದ ದೇಶವಾಗಿರುವ ಕೊಲಂಬಿಯಾದಲ್ಲಿ ಶಾಂತಿ ಪುನರ್ ಸ್ಥಾಪನೆ ಮತ್ತು ವಿಶ್ವಾಸ ವೃದ್ಧಿಗಾಗಿ ಕೊಲಂಬಿಯದ ಕ್ರಾಂತಿಕಾರಿ ಸಶಸ್ತ್ರ ಪಡೆಯ (ಫಾರ್ಕ್) ನಾಯಕರೊಂದಿಗೆ ಹಲವು ಸುತ್ತಿನ ಶಾಂತಿ ಮಾತುಕತೆ ನಡೆಸಿದ್ದರು.
ಈ ಮಾತುಕತೆಯ ಫಲಶ್ರುತಿ ಎಂಬಂತೆ ಫಾರ್ಕ್ ನಾಯಕರು ಕೊಲಂಬಿಯದಲ್ಲಿ ರಾಜಕೀಯ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿಯವರ ಅಹಿಂಸಾ ತತ್ವಗಳನ್ನು ಪಾಲಿಸಲು ಒಪ್ಪಿಕೊಂಡಿದ್ದರು.
ಗುರೂಜಿ ಅವರ ಈ ಪ್ರಯತ್ನಗಳನ್ನು ಗೌರವಿಸುವ ಸಲುವಾಗಿ ಕೊಲಂಬಿಯ ಸರಕಾರ ಕಳೆದ ವರ್ಷ ಜುಲೈಯಲ್ಲಿ ಶ್ರೀ ಶ್ರೀ ರವಿಶಂಕರ್ ಅವರಿಗೆ ದೇಶದ ಪರಮೋಚ್ಚ ಪೌರ ಪ್ರಶಸ್ತಿಯಾಗಿರುವ “ಆರ್ಡನ್ ಡೆ ಲಾ ಡೆಮೊಕ್ರಾಸಿಯಾ ಸೈಮನ್ ಬೊಲಿವರ್’ ನೀಡಿ ಪುರಸ್ಕರಿಸಿತ್ತು.
-ಉದಯವಾಣಿ