ಮೆಲ್ಬೋರ್ನ್: ಇಸ್ಲಾಮಿಕ್ ಸ್ಟೇಟ್ (ಐಸಿಸ್) ನೇಮಕಾತಿ ನಾಯಕನಾಗಿದ್ದ ಭಾರತೀಯ ಮೂಲದ ಫಿಜಿ ಪ್ರಜೆ, ಸಿರಿಯಾದಲ್ಲಿ ಸಾವನ್ನಪ್ಪಿರುವುದಾಗಿ ಮಾಧ್ಯಮ ವರದಿಗಳು ಭಾನುವಾರ ತಿಳಿಸಿವೆ.
ಮೆಲ್ಬೋರ್ನ್ನಲ್ಲಿ ಜನಿಸಿದ ಉಗ್ರಗಾಮಿ ನೀಲ್ ಪ್ರಕಾಶ್ ಸಾವಿನ ಬಗ್ಗೆ ಐಸಿಸ್ ಸದಸ್ಯನೊಬ್ಬನನ್ನು ಉಲ್ಲೇಖಿಸಿ ಆಪ್ ಟೆಲಿಗ್ರಾಂ ಕಮ್ಯೂನಿಕೇಷನ್ಸ್ ಪ್ರಕಟಿಸಿದೆ.
ಅಬು ಖಲೀದ್ ಅಲ್-ಕಾಂಬೋಡಿ ಎಂಬುದಾಗಿಯೂ ಪರಿಚಿತನಾಗಿರುವ ಐಸಿಸ್ ಕಾರ್ಯಕರ್ತ ಎನ್ನಲಾಗಿರುವ ಪ್ರಕಾಶ್ ‘ಶಹದಾ’ ಆಗಿದ್ದಾನೆ (ದೇವರಲ್ಲಿ ಐಕ್ಯನಾಗಿದ್ದಾನೆ) ಎಂದು ಐಸಿಸ್ ಮೂಲ ತಿಳಿಸಿದೆ. ಸಂಘಟನೆಯ ಯೋಧ ಸಾವನ್ನಪ್ಪಿದಾಗ ಐಸಿಸ್ ಈ ಪದವನ್ನು ಬಳಸುತ್ತದೆ. ಏನಿದ್ದರೂ ಈತ ಎಲ್ಲಿ, ಹೇಗೆ, ಯಾವಾಗ ಸಾವನ್ನಪ್ಪಿದ್ದಾನೆ ಎಂಬ ಬಗ್ಗೆ ಯಾವುದೇ ವರದಿಗಳೂ ಬಂದಿಲ್ಲ ಎಂದು ‘ಹೆರಾಲ್ಡ್ ಸನ್’ ತಿಳಿಸಿದೆ. ವಿಕ್ಟೋರಿಯಾದಲ್ಲಿ ಅನ್ಝಕ್ ದಿನದಂದು ಭಯೋತ್ಪಾದಕ ದಾಳಿ ನಡೆಸಲು ಸಂಚು ಹೂಡಿದ್ದವರ ಜೊತೆಗೆ ಸಂಪರ್ಕ ಹೊಂದಿದ್ದನೆನ್ನಲಾದ ಈ ವ್ಯಕ್ತಿ 2013ರಲ್ಲಿ ಸಿರಿಯಾಕ್ಕೆ ಪರಾರಿಯಾಗಿದ್ದ ಎಂದು ವರದಿ ತಿಳಿಸಿದೆ.