ನವದೆಹಲಿ: ಕಾಂಗ್ರೆಸ್ ಮತ್ತು ಕೆಲವು ಸಣ್ಣ ಪಕ್ಷಗಳ ಜೊತೆಗೆ ಉತ್ತರ ಪ್ರದೇಶದಲ್ಲಿ 2017ರ ವಿಧಾನಸಭಾ ಚುನಾವಣೆ ವೇಳೆಗೆ ‘ಛತ್ರಿ (ಅಂಬ್ರೆಲ್ಲಾ) ಮೈತ್ರಿ ಕೂಟ’ ರಚಿಸಿಕೊಳ್ಳುವ ಸಾಧ್ಯತೆ ಬಗ್ಗೆ ಜನತಾದಳ (ಯು) ಮತ್ತು ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಪರಿಶೀಲಿಸುತ್ತಿವೆ. ಬಿಹಾರ ಚುನಾವಣೆಯಲ್ಲಿ ಜೆಡಿ(ಯು) – ಆರ್ಜೆಡಿ- ಕಾಂಗ್ರೆಸ್ ಮಹಾಮೈತ್ರಿಕೂಟವು ಬಿಜೆಪಿ ನೇತೃತ್ವದ ಎನ್ಡಿಎಯನ್ನು ಸೋಲಿಸಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲೂ ಇಂತಹ ಸಾಧ್ಯತೆ ಬಗ್ಗೆ ಈ ಪಕ್ಷಗಳು ಯೋಚಿಸುತ್ತಿವೆ.
ರಾಜ್ಯದಲ್ಲಿ ಎರಡು ಪ್ರಮುಖ ಪಕ್ಷಗಳಾಗಿರುವ ಎಸ್ಪಿ ಮತ್ತು ಬಿಎಸ್ಪಿ ಯಾವುದೇ ಮೈತ್ರಿಕೂಟ ರಚಿಸುವ ಸಾಧ್ಯತೆಗಳನ್ನು ತಳ್ಳಿಹಾಕಿರುವ ಕಾರಣ ‘ಛತ್ರಿ ಮೈತ್ರಿಕೂಟ’ ಸಾಧ್ಯತೆ ಬಗ್ಗೆ ಆರ್ಎಲ್ಡಿ ಮುಖ್ಯಸ್ಥ ಅಜಿತ್ ಸಿಂಗ್ ಮತ್ತು ಜೆಡಿ(ಯು) ಅಧ್ಯಕ್ಷ ಶರದ್ ಯಾದವ್ ಶೀಘ್ರದಲ್ಲೇ ಚರ್ಚಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಆರ್ಎಲ್ಡಿ ಮುಖ್ಯಸ್ಥ ಅಜಿತ್ ಸಿಂಗ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೊತೆಗೆ ಕಳೆದ ತಿಂಗಳು ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಪೀಸ್ ಪಾರ್ಟಿ ಮುಖ್ಯಸ್ಥ ಅಯೂಬ್ ಅನ್ಸಾರಿ ಅವರು ಈ ಬಗ್ಗೆ ಚರ್ಚಿಸಲು ನಿತೀಶ್ ಕುಮಾರ್ ಮತ್ತು ಜೆಡಿ(ಯು) ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.