ನವದೆಹಲಿ: ಆರ್ಥಿಕ ವಿಚಾರವನ್ನು ಹೊರತು ಪಡಿಸಿ, 36 ರಾಫೇಲ್ ಸಮರ ವಿಮಾನಗಳ ಖರೀದಿ ಕುರಿತ ಪರಸ್ಪರ ಸರ್ಕಾರಿ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ಸೋಮವಾರ ಸಹಿ ಹಾಕಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಪ್ರಕಟಿಸಿದರು.
ರಾಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದ ಆರ್ಥಿಕ ಅಂಶಗಳ ಬಗೆಗಿನ ವಿಚಾರವೂ ಶೀಘ್ರವೇ ಬಗೆ ಹರಿಯುವುದು ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಪ್ರಧಾನಿ ಹೇಳಿದರು.
ಪ್ಯಾರಿಸ್ನಿಂದ ಪಠಾಣ್ಕೋಟ್ವರೆಗೂ ನಾವು ಭೀಕರ ಭಯೋತ್ಪಾದನೆಯ ಸಮಾನ ಸವಾಲನ್ನು ಕಂಡಿದ್ದೇವೆ. ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ನಮ್ಮ ಜಂಟಿ ಹೇಳಿಕೆಯು ಭಯೋತ್ಪಾದನೆಗೆ ನೆರವು ನೀಡುವ, ಆಶ್ರಯ ಕೊಡುವ ಮತ್ತು ಬೆಂಬಲಿಸುವ ಎಲ್ಲಾ ಶಕ್ತಿಗಳನ್ನೂ ನಿಗ್ರಹಿಸುವ ನಮ್ಮ ದೃಢ ನಿರ್ಧಾರವನ್ನು ಸ್ಪಷ್ಟ ಪಡಿಸುತ್ತದೆ ಎಂದು ಮೋದಿ ನುಡಿದರು.
ರಾಫೇಲ್ಗೆ ಸಂಬಂಧಿಸಿದಂತೆ ತಿಳವಳಿಕೆ ಪತ್ರಕ್ಕೆ ಸಹಿ ಹಾಕಿರುವುದು ಒಂದು ‘ನಿರ್ಣಾಯಕ ಹೆಜ್ಜೆ’ ಎಂದು ಫ್ರೆಂಚ್ ಅಧ್ಯಕ್ಷ ಹೊಲಾಂಡೆ ಬಣ್ಣಿಸಿದರು. ಕೆಲವು ಆರ್ಥಿಕ ವಿಷಯಗಳು ಉಳಿದುಕೊಂಡಿವೆ. ಕೆಲವೇ ದಿನಗಳಲ್ಲಿ ಅವುಗಳನ್ನು ಇತ್ಯರ್ಥ ಪಡಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.