ನವದೆಹಲಿ : ಭಾರತದ ಕೆಚ್ಚೆದೆಯ ಸ್ವಾತಂತ್ರ್ಯ ಸೇನಾನಿ ಎನಿಸಿಕೊಂಡಿದ್ದ ಸುಭಾಷ್ ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ತೈಪೆಯಲ್ಲಿ ವಿಮಾನ ದುರಂತದಲ್ಲಿ ಮಡಿದಿದ್ದಾಗ ಅವರ ಬಳಿ ಅತ್ಯಮೂಲ್ಯ ವಸ್ತುಗಳಿಂದ ತುಂಬಿದ್ದ ಒಂದು ನಿಗೂಢ ಬ್ಯಾಗ್ ಇತ್ತು.
ವಿಮಾನವು ಸುಟ್ಟು ಉರಿದು ಪತನಗೊಂಡ ಸಂದರ್ಭದಲ್ಲಿ ಆ ಅಮೂಲ್ಯ ನಿಗೂಢ ಬ್ಯಾಗ್ ಅಲ್ಪಸ್ವಲ್ಪ ಹಾನಿಗೊಂಡಿತ್ತು. ವಿಮಾನ ದುರಂತ ಸಂಭವಿಸಿದ ಸುಮಾರು ಆರು ವರ್ಷಗಳ ಬಳಿಕ ಈ ನಿಗೂಢ ಬ್ಯಾಗ್ ಭಾರತ ಸರಕಾರದ ವಶವಾಗಿತ್ತು. ಆದರೆ ಆ ಹೊತ್ತಿಗಾಗಲೇ ಆ ಬ್ಯಾಗ್ ನ ತೂಕ ಗಮನಾರ್ಹವಾಗಿ ಕಡಿಮೆಯಾಗಿತ್ತು ಮತ್ತು ಅದರೊಳಗಿನ ಹಲವಾರು ವಸ್ತುಗಳನ್ನು ಯಾರೋ ತೆಗೆದಿಟ್ಟಿರಬಹುದೆಂದು ಶಂಕಿಸಲಾಗಿದೆ.
ಸುಭಾಷ್ ಚಂದ್ರ ಬೋಸ್ ಅವರ ಈ ನಿಗೂಢ ಬ್ಯಾಗ್ 1945ರಿಂದ 1951ರ ವರೆಗೆ ಜಪಾನಿನ ಟೋಕಿಯೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್‌ನ ಮಾಜಿ ಅಧ್ಯಕ್ಷ ಮುಂಗಾ ರಾಮ್ ಮೂರ್ತಿ ಎಂಬವರ ವಶದಲ್ಲಿತ್ತು.
ಬೋಸ್ ಅವರ ಈ ಅಮೂಲ್ಯ ಬ್ಯಾಗ್ 1951ರ ಸುಮಾರಿಗೆ ಭಾರತದ ವಶಕ್ಕೆ ಒಪ್ಪಿಸಲಾಗಿತ್ತಾದರೂ ರಾಜತಾಂತ್ರಿಕವಾಗಿ ಸೀಲ್ ಮಾಡಲ್ಪಟ್ಟಿದ್ದ ಈ ಬ್ಯಾಗನ್ನು ಆಗಿನ ಪ್ರಧಾನಿಯವರ ಆದೇಶದ ಪ್ರಕಾರ 1978ರ ಅಕ್ಟೋಬರ್ 9 ರಂದು ತೆರೆದು ನೋಡಲಾಯಿತು !
ಸುಭಾಷ್ ಚಂದ್ರ ಬೋಸ್ ಅವರ ಶಂಕಾಸ್ಪದ ಸಾವಿನ ಕುರಿತಾಗಿ ತನಿಖೆಗೆ ರೂಪಿಸಲಾಗಿದ್ದ ಶಹನವಾಜ್ ಖಾನ್ ಸಮಿತಿಯ ಪ್ರಕಾರ ನೇತಾಜಿ ಅವರ ಈ ನಿಗೂಢ ಬ್ಯಾಗನ್ನು ತೆರೆದು ನೋಡಿದಾಗ ಅದರೊಳಗಿದ್ದ ವಸ್ತುಗಳ ಅಂದಾಜು ಬೆಲೆ ಆಗಿನ ಮೌಲ್ಯದ ಪ್ರಕಾರ 1 ಲಕ್ಷ ರೂ. ಎಂದು ತಿಳಿಯಲಾಗಿತ್ತು.
ಸ್ಟೀಲ್ ಸೂಟ್ ಕೇಸ್ ನ ನೇತಾಜಿ ಅವರ ಈ ನಿಗೂಢ ಬ್ಯಾಗ್ ನಲ್ಲಿ ಒಟ್ಟು 17 ಪೊಟ್ಟಣಗಳು ಕಂಡು ಬಂದಿದ್ದವು. ಇವುಗಳಲ್ಲಿ 13 ಪೊಟ್ಟಣಗಳು ಹಳದಿ ಲಕೋಟೆಯೊಳಗೆ ಇದ್ದವು. 2 ಪೊಟ್ಟಣಗಳು ಬೂದು ಬಣ್ಣದ ಕಾಗದದಲ್ಲಿ ಕಟ್ಟಲ್ಪಟ್ಟಿದ್ದವು. ಒಂದು ಪೊಟ್ಟಣವನ್ನು ಸಾಧಾರಣ ಗೋಣಿ ಚೀಲದಲ್ಲಿ ಕಟ್ಟಿಡಲಾಗಿತ್ತು. ಇನ್ನೊಂದು ಪೊಟ್ಟಣವನ್ನು ಬಟ್ಟೆಯಲ್ಲಿ ಸುತ್ತಿಡಲಾಗಿತ್ತು.
ಒಟ್ಟಾರೆಯಾಗಿ ಈ ಪೊಟ್ಟಣಗಳಲ್ಲಿ ಕಂಡು ಬಂದ ವಸ್ತುಗಳಲ್ಲಿ ಚಿನ್ನದ ಉಂಗುರ, ಕಡಗ, ಬಳೆಗಳು, ವಾಚುಗಳ, ಚರಕದ ವಿನ್ಯಾಸ ಸಹಿತವಾಗಿ ಹಲವು ಬಗೆಯ ಬ್ರೋಚ್‌ಗಳು, ಪೆಂಡೆಂಟ್‌ಗಳು, ಲೋಹದ ವಸ್ತುಗಳು, ಚಿನ್ನದ ಕೇಸ್ ಒಂದರ ಮುಚ್ಚಳ, ನಾಣ್ಯಗಳು, ಶಕುನದ ಪೆಂಡೆಂಟ್‌ಗಳು, ಕಿವಿಯೋಲೆಗಳು, ಚಿನ್ನದ ಸರಗಳು, ಮೂಗುತಿಗಳು, ಹರಳುಗಳು ಇದ್ದವು.
ನೇತಾಜಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟ ಮಾಡುವ ಉದ್ದೇಶದಿಂದ ಜನರಿಂದ ನಗದು ಸಹಿತವಾಗಿ ಯಾವುದೇ ಬಗೆಯ ಅಮೂಲ್ಯ ವಸ್ತುಗಳನ್ನು ಸ್ವೀಕರಿಸಿ ಸಂಗ್ರಹಿಸಿಡುತ್ತಿದ್ದರು. ತೈಪೆ ವಿಮಾನ ದುರಂತದಲ್ಲಿ ಸಾಯುವ ಸಂದರ್ಭದಲ್ಲಿ ಕೂಡ ಬೋಸ್ ಅವರು ತಮ್ಮ ದೇಶದ ಜನರ ಈ ಪ್ರೀತಿಯ ಕಾಣಿಕೆಗಳನ್ನು ತಮ್ಮ ಜತೆಗೇ ಬ್ಯಾಗಿನಲ್ಲಿ ಭದ್ರವಾಗಿ ಇರಿಸಿಕೊಂಡು ದೇಶಕ್ಕಾಗಿ ಹೋರಾಡಿ ಮಡಿಯುವ ದೃಢ ಸಂಕಲ್ಪವನ್ನು ಸದಾಕಾಲ ಹೊಂದಿದ್ದರು.
-ಉದಯವಾಣಿ