ಲಖನೌ: ಆತ್ಮಹತ್ಯೆಗೆ ಶರಣಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ನೆನದು ಭಾವುಕರಾದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತಾಂಬೆ ಒಬ್ಬ ಪ್ರತಿಭಾವಂತ ಪುತ್ರನನ್ನು ಕಳೆದುಕೊಂಡಿದೆ ಎಂದರು.
ಇಂದು ವಿದ್ಯಾರ್ಥಿಗಳ ವಿರೋಧದ ನಡುವೆಯೂ ಲಖನೌನ ಅಂಬೇಡ್ಕರ್ ವಿವಿ ಘಟಿಕೋತ್ಸವದಲ್ಲಿ ಮಾತನಾಡಿದ ಮೋದಿ, ರೋಹಿತ್ ಆತ್ಮಹತ್ಯೆಯಿಂದ ತೀವ್ರ ದುಃಖವಾಗಿದೆ. ಪ್ರತಿಭಾವಂತ ಮಗನನ್ನು ತಾಯಿ ಕಳೆದುಕೊಂಡಿದ್ದಾರೆ. ಆತನ ಪೋಷಕರ ದುಃಖ ನನಗೆ ಅರ್ಥವಾಗುತ್ತೆ ಎಂದರು.
ಮೋದಿ ಭಾಷಣ ಶುರು ಮಾಡುತ್ತಿದ್ದಂತೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿವಿಯ ಕೆಲವು ವಿದ್ಯಾರ್ಥಿಗಳು, ಮೋದಿ ಗೋ ಬ್ಯಾಕ್, ನರೇಂದ್ರ ಮೋದಿ ಮುರ್ದಾಬಾದ್ ಎಂದು ಘೋಷಣೆ ಕೂಗಿ ಪ್ರತಿಭಟಿಸಿದರು.
ಪ್ರತಿಭಟನೆ ವೇಳೆ ಮಧ್ಯಪ್ರವೇಶಿಸಿದ ಭದ್ರತಾ ಸಿಬ್ಬಂದಿ, ಧರಣಿನಿರತ ವಿದ್ಯಾರ್ಥಿಗಳನ್ನು ಆಡಿಟೋರಿಯಂನಿಂದ ಹೊರಗೆ ಕರೆದೊಯ್ದರು. ವಿವಿಯಿಂದ ಅಮಾನತು ಮಾಡಿದ್ದರಿಂದ ಹಾಗೂ ಹಾಸ್ಟೇಲ್ ಗೆ ನಿಷೇಧ ಹೇರಿದ್ದರಿಂದ ನೊಂದ ಸಂಶೋಧಾನ ವಿದ್ಯಾರ್ಥಿ ರೋಹಿತ್ ವೇಮುಲಾ ಕಳೆದ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದರು.