ಪಠಾಣ್ಕೋಟ್, ಜ.9-ಮೌಲಾನಾ ಮಸೂದ್ ಅಜರ್ ನೇತೃತ್ವದ ಪಾಕಿಸ್ಥಾನದ ಜೈಷ್-ಎ-ಮೊಹಮ್ಮದ್ ಸಂಘಟನೆಯು ತನ್ನ ವೆಬ್ಸೈಟ್ ಮೂಲಕ ಧ್ವನಿಸುರುಳಿಯೊಂದನ್ನು ಅಪ್ಲೋಡ್ ಮಾಡಿದ್ದು, ಅದರಲ್ಲಿ ಭಾರತೀಯ ರಕ್ಷಣೆ ಹಾಗೂ ಗುಪ್ತಚರ ಇಲಾಖೆಗಳನ್ನು ಲೇವಡಿ ಮಾಡಲಾಗಿದೆ. ಸಂಘಟನೆಯ 6 ಜನ ಜಿಹಾದಿಗಳು ವಾಯುನೆಲೆ ಪ್ರವೇಶಿಸಿದ್ದನ್ನು ನಿಮ್ಮಿಂದ ಪತ್ತೆ ಹಚ್ಚಲು ಅಥವಾ ಸೆರೆ ಹಿಡಿಯಲು ನಿಮ್ಮಿಂದಾಗಲಿಲ್ಲ ಎಂದು ಅಣಕವಾಡಿರುವ ಜೆಎಎಂ, ಸಾಧ್ಯವಾಗದಿರುವುದು ತಮಾಷೆಯಾಗಿದೆ ಎಂದಿದೆ. ಅಷ್ಟೇ ಅಲ್ಲದೆ, ವಿವಿಧ ಸ್ಥಳಗಳಲ್ಲಿ ಮಾತನಾಡಿರುವ ಸಂಘಟನೆಯ ವ್ಯಕ್ತಿ, ಜೈಷ್-ಎ-ಮೊಹಮ್ಮದ್ ಜಿಹಾದಿಗಳು ಹೇಗೆ ಭಾರತದೊಳಕ್ಕೆ ನುಸುಳಿದರು. ಹೇಗೆ ರಕ್ಷಣಾ ವಾಹನಗಳು, ಹೆಲಿಕಾಪ್ಟರ್ಗಳ ಮೇಲೆ ದಾಳಿ ನಡೆಸಿದರು ಎಂಬುದನ್ನು ವಿವರವಾಗಿ ಹೇಳಿದ್ದಾನೆ.
13 ನಿಮಿಷಗಳ ಈ ಆಡಿಯೋದಲ್ಲಿ ಹೇಳಿರುವ ಮಾತುಗಳು ಉಗ್ರ ಅಜರ್ನ ಸ್ವಂತ ಊರು ಬಹವಲ್ಪುರ್ನ ಮ್ಯಾಗಜಿನ್ ಒಂದರಲ್ಲಿ ಮುದ್ರಣಗೊಂಡಿದೆ ಎಂದು ತಿಳಿಸಲಾಗಿದೆ. ಆ ವ್ಯಕ್ತಿ ಸ್ಥಳೀಯ (ಬಹವಾಲ್ಪುರ್) ಉರ್ದು ಭಾಷೆಯಲ್ಲಿ ಮಾತನಾಡಿದ್ದಾನೆ.
ಪಾಕ್ಗೆ ಎಚ್ಚರಿಕೆ: ಭಾರತ ನೀಡುವ ಯಾವುದೇ ಸಾಕ್ಷ್ಯಾಧಾರಗಳನ್ನು ಸ್ವೀಕರಿಸಬಾರದು. ಪಾಕಿಸ್ಥಾನ್ಕಿ ಇಲಾಮ್ ಇಂಡಿಯಾಕಿ ಇಜ್ಞಾಮ್ ಕೆ ಸಾಮ್ನೆ ಕ್ಯೋನ್ ಜೂಕ್ತೆ ಹೈ? ಕ್ಯೋನ್ ಷರ್ಮತೆ ಹೈ? (ಪಾಕಿಸ್ಥಾನ ನಾಯಕತ್ವ ಏಕಾಗಿ ಭಾರತದೆದುರು ತಲೆಬಾಗಬೇಕು? ಅವರೇಕೆ ನಮ್ಮನ್ನು ಅವಮಾನಿಸಬೇಕು?) ಎಂದು ಧ್ವನಿ ಸುರುಳಿಯಲ್ಲಿ ಮಾತನಾಡಿರುವ ವ್ಯಕ್ತಿ ಪ್ರಶ್ನಿಸಿದ್ದಾನೆ. ಭಾರತದ ರಕ್ಷಣಾ ಸಂಸ್ಥೆಗಳಿಂದ ನಮ್ಮ 6 ಮಂದಿ ಮುಜಾಹಿದೀನ್ಗಳನ್ನು ಕಂಡು ಹಿಡಿಯಲಾಗಿಲ್ಲ. ಹುತಾತ್ಮರಾದ ಕರ್ನಲ್ ನಿರಂಜನ್ ಕುಮಾರ್ ಹಾಗೂ ಷೂಟರ್ ಫತೇಹ್ ಸಿಂಗ್ ಅವರ ಬಗ್ಗೆಯೂ ಆ ವ್ಯಕ್ತಿ ಅವಮಾನಕರವಾಗಿ ಮಾತನಾಡಿದ್ದಾನೆ. ದಾಳಿಕೋರರ ಸಂಖ್ಯೆ ಬಗ್ಗೆಯೂ ಅವರಿಗೆ ಇನ್ನೂ ಗೊಂದಲ ಬಗೆಹರಿದಿಲ್ಲ. ಒಂದು ಬಾರಿ 6 ಜನ ಅಂದರೆ, ಇನ್ನೊಮ್ಮೆ ಐವರು ಎನ್ನುತ್ತಾರೆ. ಮಗದೊಮ್ಮೆ ಮೂವರು, ನಾಲ್ವರು ಎನ್ನುತ್ತಾರೆ. ಅಂತಹ ಬೃಹತ್ ದೇಶ ಅಲ್ಲಾಡಿಹೋಗಿದೆ. ನಾವು ಅಪರಾಧಿಗಳೆಂದು ಹೇಡಿಗಳಂತೆ ನಮ್ಮತ್ತ ಬೆರಳು ಮಾಡುತ್ತಾರೆ.
ಪಠಾಣ್ಕೋಟ್ ದಾಳಿ ಆತ್ಮಾಹುತಿ ದಳದ ಕಾರ್ಯಾಚರಣೆ, ವಾಯುನೆಲೆ ಮೇಲೆ ದಾಳಿ ನಡೆಸಿದ್ದು ನಾಲ್ವರು ಮುಜಾಹಿದೀನ್ಗಳು, ಶುಕ್ರವಾರ ರಾತ್ರಿ ಕಳೆದು ಬೆಳಗಿನ ಜಾವ 3 ಗಂಟೆಗೆ ಈ ಕಾರ್ಯಾಚರಣೆ ನಡೆದದ್ದು. ಕಲ್ಲು ನೀರು ಕರಗುವ ಸಮಯ. ಆಗ ಮುಜಾಹಿದೀನ್ಗಳು ವಾಯುನೆಲೆ ಪ್ರವೇಶಿಸಿದರು. ಅದೆಷ್ಟು ಸಾಹಸ ಅಂತ ಯೋಚನೆ ಮಾಡಿ. ನಮ್ಮವರು ಆ ಕೊರೆಯುವ ಚಳಿಯಲ್ಲಿ ಪ್ರತಿಕೂಲ ವಾತಾವರಣದಲ್ಲಿ 48 ಗಂಟೆಗಳ ಕಾಲ ನಿದ್ರೆ ಮಾಡದೆ, ಆಹಾರ ಸೇವಿಸದೆ ಹೇಗೆ ಕಾದಾಡಿದರು ಎಂಬುದು ನಿಜಕ್ಕೂ ಅಚ್ಚರಿ ಎಂದು ಆ ವ್ಯಕ್ತಿ ಮಾತು ಮುಗಿಸಿದ್ದಾನೆ.