ಕರ್ನಾಟಕ

ಬೆಂಗಳೂರಲ್ಲಿ ಝಳಪಿಸಿದ ಮಚ್ಚು, ಲಾಂಗ್‌ಗಳು : ಮೂವರ ಬರ್ಬರ ಕೊಲೆ

Pinterest LinkedIn Tumblr

crimeಬೆಂಗಳೂರು, ಜ.9- ಫೈನಾನ್ಷಿಯರ್ ಹಾಗೂ ಬಿಜೆಪಿ ಕಾರ್ಯಕರ್ತ ಸೇರಿದಂತೆ ನಗರದಲ್ಲಿ ಕಳೆದ ರಾತ್ರಿ ಮೂವರನ್ನು ಹತ್ಯೆ ಮಾಡಲಾಗಿದೆ.  ಚಂದ್ರಾಲೇಔಟ್ ವ್ಯಾಪ್ತಿಯಲ್ಲಿ ಸೈಕಲ್ ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ  ವ್ಯಕ್ತಿಯನ್ನು, ಸುಬ್ರಹ್ಮಣ್ಯಪುರದಲ್ಲಿ ಫೈನಾನ್ಷಿಯರ್ ಹಾಗೂ ಬಿಜೆಪಿ ಕಾರ್ಯಕರ್ತ  ಸಂದೀಪ್‌ರೆಡ್ಡಿ ಮತ್ತು ಕೆ.ಜೆ.ಹಳ್ಳಿಯಲ್ಲಿ ಅಪರಿಚಿತ ಯುವಕನನ್ನು ದುಷ್ಕರ್ಮಿಗಳು ಕೊಲೆ  ಮಾಡಿದ್ದಾರೆ. ಚಂದ್ರಾಲೇಔಟ್: ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಮೂಲತಃ ಚನ್ನಪಟ್ಟಣ ತಾಲೂಕು ದಶವಾರದ ನಿವಾಸಿ ಶಿವಮಾದ (40) ಎಂದು ಗುರುತಿಸಲಾಗಿದೆ.

ನಗರದ ನಾಯಂಡನಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ಶಿವಮಾದು ವಾಸವಾಗಿದ್ದು, ಬಿ.ವಿ.ಕೆ.ಅಯ್ಯಂಗಾರ್ ರಸ್ತೆಯಲ್ಲಿನ ಸೈಕಲ್ ಮಾರ್ಟ್‌ನಲ್ಲಿ  ಕೆಲಸ ಮಾಡುತ್ತಿದ್ದನು.

ನಿನ್ನೆ ಸಂಜೆ ಪರಿಚಯಸ್ಥರೊಬ್ಬರ ಬರ್ತಡೇ ಪಾರ್ಟಿಗೆ ಹೋಗಿದ್ದು, ರಾತ್ರಿ  ಮನೆಗೆ ವಾಪಸ್ಸಾಗುತ್ತಿದ್ದಾಗ ವಿನಾಯಕ ದೇವಾಲಯದ ಬಳಿ ಈತನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು  ಹಲ್ಲೆ ನಡೆಸಿ ಮಾರಕಾಸ್ತ್ರದಿಂದ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಬೆಳಗ್ಗೆಯಾಗುವವರೆಗೂ ಈ ಕೊಲೆ ಯಾರ ಗಮನಕ್ಕೂ ಬಂದಿಲ್ಲ. ಮುಂಜಾನೆ 6 ಗಂಟೆ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಹೋಗುತ್ತಿದ್ದ ಸ್ಥಳೀಯರೊಬ್ಬರು ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿದ್ದ ವ್ಯಕ್ತಿಯನ್ನು ಕಂಡು ಗಾಬರಿಯಾಗಿ ತಕ್ಷಣ ಚಂದ್ರಾಲೇಔಟ್ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಪ್ರಕರಣ ದಾಖಲಿಸಿಕೊಂಡು  ಯಾರು, ಏತಕ್ಕಾಗಿ ಈ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.

ಸುಬ್ರಹ್ಮಣ್ಯಪುರ:

ಮತ್ತೊಂದು ಪ್ರಕರಣದಲ್ಲಿ ಫೈನಾನ್ಷಿಯರ್ ಹಾಗೂ  ಬಿಜೆಪಿ ಕಾರ್ಯಕರ್ತನೂ ಆಗಿರುವ ಸಂದೀಪ್‌ರೆಡ್ಡಿ (25) ಎಂಬಾತ ಕೊಲೆಯಾಗಿದೆ. ಜೆ.ಪಿ.ನಗರದ ರಾಘವೇಂದ್ರ ಕಾಲೋನಿ ನಿವಾಸಿಯಾದ ಸಂದೀಪ್‌ರೆಡ್ಡಿ ರಾತ್ರಿ 11.30ರಲ್ಲಿ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ  ಮತ್ತೊಂದು ಕಾರಿನಲ್ಲಿ ಹಿಂಬಾಲಿಸುತ್ತಿದ್ದ  ಮೂವರು  ದುಷ್ಕರ್ಮಿಗಳು ಆರ್.ಬಿ.ಎ. ಲೇಔಟ್ ಬಳಿ ಬರುತ್ತಿದ್ದಂತೆ, ಕಾರನ್ನು ಅಡ್ಡಗಟ್ಟಿ ಸಂದೀಪ್‌ರೆಡ್ಡಿಯನ್ನು ಹೊರಗೆಳೆದು ಮನಬಂದಂತೆ ಮಚ್ಚು-ಲಾಂಗುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.  ಗಂಭೀರ ಗಾಯಗೊಂಡ ಸಂದೀಪ್‌ರೆಡ್ಡಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.ಹಳೇ ದ್ವೇಷ ಹಾಗೂ ಹಣಕಾಸು ವಿಚಾರದಲ್ಲಿ ಕೊಲೆ ನಡೆದಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಶವವನ್ನು ಕೆಂಪೇಗೌಡ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಕೆ.ಜೆ.ಹಳ್ಳಿ : ಖಾಲಿ ನಿವೇಶನವೊಂದರಲ್ಲಿ ಯುವಕನೊಬ್ಬನನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ಶವಕ್ಕೆ ಬೆಂಕಿ ಹಚ್ಚಿರುವ ಘಟನೆ  ಕೆ.ಜೆ.ಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಯುವಕನ ಹೆಸರು, ವಿಳಾಸ ತಿಳಿದುಬಂದಿಲ್ಲ. ಸುಮಾರು 20 ರಿಂದ 25 ವರ್ಷದವನಂತೆ ಕಾಣುವ ಈ ಯುವಕನನ್ನು ಈರಣ್ಣನಪಾಳ್ಯದ ಖಾಲಿ ನಿವೇಶನದಲ್ಲಿ ರಾತ್ರಿ ದುಷ್ಕರ್ಮಿಗಳು ಕೊಲೆ ಮಾಡಿ ಗುರುತು ಸಿಗಬಾರದೆಂದು ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಳಗ್ಗೆ ಈ ಭಾಗದಲ್ಲಿ ಹೋಗುತ್ತಿದ್ದ ಸ್ಥಳೀಯರೊಬ್ಬರು ಭಾಗಶಃ ಸುಟ್ಟಿದ್ದ ಶವವನ್ನು ಕಂಡು ಗಾಬರಿಯಾಗಿ ತಕ್ಷಣ ಕೆ.ಜೆ.ಹಳ್ಳಿ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಅಂಬೇಡ್ಕರ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Write A Comment