ನವದೆಹಲಿ: ತೀವ್ರ ಕೋಲಾಹಲದ ಮಧ್ಯೆಯೇ 20 ದಿನಗಳ ಸಂಸತ್ ಚಳಿಗಾಲದ ಅಧಿವೇಶನಕ್ಕೆ ಬುಧವಾರ ತೆರೆ ಬಿದ್ದಿದ್ದು, ಕೋಲಾಹಲದ ನಡುವೆಯೇ 13 ಮಸೂದೆಗಳಿಗೆ ಲೋಕಸಭೆಯ ಅಂಗೀಕಾರ ದೊರೆತಿದೆ.
ಅಧಿವೇಶನದ ಕೊನೆಯ ದಿನವಾದ ಇಂದು ಸಹ ರಾಮಮಂದಿರ ನಿರ್ಮಾಣ ವಿಷಯದಲ್ಲಿ ಪ್ರತಿಪಕ್ಷಗಳು ತೀವ್ರ ಕೋಲಾಹಲವುಂಟು ಮಾಡಿದ್ದರಿಂದ ಕಲಾಪ ನಡೆಸಲು ಸಾಧ್ಯವಾಗದೇ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಲೋಕಸಭೆ ಕಲಾಪವನ್ನು ಅನಿರ್ಧಾವಧಿಗೆ ಮುಂದೂಡಿದರು.
ಈ ಬಾರಿ ಲೋಕಸಭೆಯಲ್ಲಿ 14 ಹಾಗೂ ರಾಜ್ಯಸಭೆಯಲ್ಲಿ 9 ಮಸೂದೆಗಳು ಪಾಸ್ ಆಗಿವೆ. ಆದರೆ ಈ ಬಾರಿಯ ಕಲಾಪ ಪ್ರತಿಪಕ್ಷಗಳ ಗಿಮಿಕ್ ಗೆ ಬಲಿಯಾಗಿರುವುದಾಗಿ ಆಡಳಿತಾರೂಢ ಬಿಜೆಪಿ ಆರೋಪಿಸಿದೆ.
20 ದಿನಗಳ ಕಾಲ ನಡೆದ ಚಳಿಗಾಲದ ಅಧಿವೇಶನದಲ್ಲಿ ಬಹುತೇಕ ಕಲಾಪ ಮುಂದೂಡಿಕೆ, ಗದ್ದಲದಲ್ಲೇ ಅಂತ್ಯಕಂಡಿತ್ತು. ಆದರೆ ಕಳೆದ ಬಾರಿಯ ಮುಂಗಾರು ಅಧಿವೇಶನಕ್ಕಿಂತ ಈ ಬಾರಿಯ ಚಳಿಗಾಲದ ಅಧಿವೇಶನ ಸ್ವಲ್ಪಮಟ್ಟಿಗೆ ಉತ್ತಮವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಡಿಡಿಸಿಎ ಹಗರಣ ಹಾಗೂ ಅಸಹಿಷ್ಣುತೆ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಉಭಯ ಸದನಗಳಲ್ಲೂ ತೀವ್ರ ಕೋಲಾಹಲ ಸೃಷ್ಟಿಸಿದ್ದವು.
9.9 ಕೋಟಿ ನಷ್ಟ
ಉಭಯ ಸದನಗಳ ಕಲಾಪಕ್ಕೆ ಪ್ರತಿ ನಿಮಿಷಕ್ಕೆ ತಗಲುವ ವೆಚ್ಚ 29 ಸಾವಿರ ರುಪಾಯಿ. ಆ ನಿಟ್ಟಿನಲ್ಲಿ ರಾಜ್ಯಸಭೆಯಲ್ಲಿ ಸುಮಾರು ಸರ್ಕಾರದ ಬೊಕ್ಕಸಕ್ಕೆ 10 ಕೋಟಿ ರೂಪಾಯಿ ನಷ್ಟವಾಗಿದೆ.