
ನವದೆಹಲಿ, ಡಿ.12: ಒಂದೆರಡು ದಿನಗಳ ಹಿಂದಷ್ಟೇ 18 ವರ್ಷದ ಯುವತಿ ಮೇಲೆ ಹಲವಾರು ಮಂದಿ ದುಷ್ಕರ್ಮಿಗಳು ನಿರಂತರ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆಯ ಬೆನ್ನಲ್ಲೇ ಇದೀಗ ಇನ್ನೊಬ್ಬಳು ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ 6 ಜನ ನೀಚರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಆಗ್ನೇಯ ದೆಹಲಿಯ ಡಿಬಾವೋನ್ ಪ್ರದೇಶದಲ್ಲಿ ಮನೆಯಿಂದ ಶಾಲೆಗೆ ತೆರಳುತ್ತಿದ್ದ 14 ವರ್ಷದ ಬಾಲಕಿಯನ್ನು ಬಲವಂತವಾಗಿ ವಾಹನವೊಂದರಲ್ಲಿ ಎತ್ತಿಹಾಕಿಕೊಂಡು ಹೋದ 6 ಜನ ದುಷ್ಕರ್ಮಿಗಳು ನಿರ್ಜನ ಪ್ರದೇಶವೊಂದರಲ್ಲಿ ವಾಹನ ನಿಲ್ಲಿಸಿ ವಾಹನದಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯನ್ನು ಪ್ರತ್ಯಕ್ಷವಾಗಿ ಕಂಡ ವ್ಯಕ್ತಿಯೊಬ್ಬರು, ಎಎಸ್‌ಪಿ ಓಂಪ್ರಕಾಶ್ ಎಂಬುವವರಿಗೆ ತಿಳಿಸಿದ್ದು, ಅವರು ಕೂಡಲೇ ಮುಂಡ್ಕಾ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ನರಳುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಆರೋಪಿಗಳನ್ನು ರಾಹುಲ್ (19), ಸೂರಜ್ (21), ಸುದೀಪ್ (21), ರಮೇಶ್ (27), ನರೇಂದ್ರ ಅಲಿಯಾಸ್ ಚಾಂಚಲ್(20) ಹಾಗೂ ಅಮನ್ (20) ಎಂದು ಗುರುತಿಸಲಾಗಿದೆ. ರಾಹುಲ್ ಬಾಲಕಿಯ ನೆರೆಮನೆಯವನೇ ಆಗಿದ್ದು, ಅವನನ್ನು ಸಂತ್ರಸ್ತೆ ಗುರುತಿಸಿದ್ದಾಳೆ.
ಉಳಿದವರ ಗುರುತು ಸಿಕ್ಕಿಲ್ಲ. ಖಾಸಗಿ ಸಂಸ್ಥೆಯೊಂದರ ಟಾಟಾ ಸುಮೊ ಬಾಡಿಗೆ ಪಡೆದು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಸಂದೀಪ್ ಚಾಲಕನಾಗಿದ್ದ. ಬೆಳಗ್ಗೆ 8 ರಿಂದ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬಾಲಕಿ ಶಾಲೆಗೆ ಹೊರಟ ಸಂದರ್ಭ ರಾಹುಲ್ ಅವಳ ಬಳಿ ವಾಹನ ನಿಲ್ಲಿಸಿ ಹತ್ತಿಕೊಳ್ಳುವಂತೆ ಕರೆದಿದ್ದಾನೆ. ಆದರೆ ಬಾಲಕಿ ಓಡಲು ಪ್ರಯತ್ನಿಸಿದ್ದಾಳೆ. ಐವರೂ ಸೊಮೋ ಇಳಿದು ಬಲವಂತವಾಗಿ ಅವಳನ್ನು ವಾಹನದೊಳಕ್ಕೆ ಎಳೆದೊಯ್ದಿದ್ದಾರೆ. ನಂತರ ಅತ್ಯಾಚಾರ ಎಸಗಿ ಬಾಲಕಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಅಳುತ್ತಿದ್ದ ಬಾಲಕಿ ಕಂಡ ದಾರಿ ಹೋಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಡಿಸಿಪಿ ಪುಷ್ಪೇಂದ್ರ ಕುಮಾರ್ ಹೇಳಿದ್ದಾರೆ. ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಿದ್ದು, ಪೊಕ್ಸೊ (ಪಿಒಸಿಎಸ್‌ಒ) ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ತನ್ನನ್ನೂ, ತನ್ನ ಕಿರಿಯ ಸಹೋದರನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಬಾಲಕಿ ಹೇಳಿದ್ದಾಳೆ.