ರಾಷ್ಟ್ರೀಯ

ದೇಣಿಗೆ ಪಡೆದಿರುದರಲ್ಲಿ ಬಿಜೆಪಿಯದ್ದೇ ಮೇಲುಗೈ ! 1 ವರ್ಷದಲ್ಲಿ ಪಕ್ಷ ಪಡೆದಿದ್ದು ರು.437.35 ಕೋಟಿ

Pinterest LinkedIn Tumblr

money

ನವದೆಹಲಿ: ಲೋಕಸಭೆ ಚುನಾವಣೆಯ ಭರ್ಜರಿ ಗೆಲವಿನ ಬಳಿಕ ಬಿಜೆಪಿಯು ಕಾರ್ಪೋರೇಟ್ ದೇಣಿಗೆಯ ಫೇವರಿಟ್ ಪಕ್ಷವಾಗಿಬಿಟ್ಟಿದೆ. 2014-15ರ ವಿತ್ತೀಯ ಅವಧಿಯಲ್ಲಿ ಕಾಂಗ್ರೆಸ್‍ಗಿಂತ ಮೂರು ಪಟ್ಟು ಅಧಿಕ ದೇಣಿಗೆಯನ್ನು ಬಿಜೆಪಿ ಪಡೆದಿದೆ.

ಈ ಒಂದು ವರ್ಷದಲ್ಲಿ ಬಿಜೆಪಿ ಪಡೆದ ದೇಣಿಗೆ ಬರೋಬ್ಬರಿ ರು.437.35 ಕೋಟಿ. ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ಮತ್ತು ದಿ ನ್ಯಾಷನಲ್ ಎಲೆಕ್ಷನ್ ವಾಚ್ ತಯಾರಿಸಿದ ವರದಿ ಈ ವಿಚಾರವನ್ನು ತಿಳಿಸಿದೆ.

ರು.20 ಸಾವಿರಕ್ಕಿಂತ ಅಧಿಕ ಮೊತ್ತದ ವೈಯಕ್ತಿಕ ಹಾಗೂ ಕಾರ್ಪೋರೇಟ್ ದೇಣಿಗೆಗಳನ್ನು ಲೆಕ್ಕ ಹಾಕಿದರೆ, ಬಿಜೆಪಿ ಅಗ್ರ ಸ್ಥಾನ ಪಡೆದಿದೆ. ಕಾಂಗ್ರೆಸ್, ಎನ್‍ಸಿಪಿ, ಸಿಪಿಐ ಮತ್ತು ಸಿಪಿಎಂಗಳಿಗೆ ದೊರೆತ ಒಟ್ಟು ದೇಣಿಗೆಯನ್ನೂ ಮೀರಿದೆ ಬಿಜೆಪಿಗೆ ಸಿಕ್ಕ ಡೊನೇಷನ್.

ರು.437.35 ಕೋಟಿಯಲ್ಲಿ ಶೇ.39ರಷ್ಟು ಕಾರ್ಪೋರೇಟ್ ವಲಯದಿಂದ ಬಂದಿದ್ದು, ಅತಿ ಹೆಚ್ಚಿನ ಕೊಡುಗೆ ನೀಡಿದ ರಾಜ್ಯವೆಂದರೆ ಮಹಾರಾಷ್ಟ್ರ. ಕಳೆದ ವರ್ಷ ಬಿಜೆಪಿಯ ದೇಣಿಗೆ ರು.170.86 ಕೋಟಿಯಿತ್ತು. ಶೇಕಡಾವಾರು ಲೆಕ್ಕ ಹಾಕಿದರೆ, ಶರದ್ ಪವಾರ್ ಅವರ ಎನ್‍ಸಿಪಿ ಶೇ.177ರಷ್ಟು ಹೆಚ್ಚು ದೇಣಿಗೆ ಪಡೆದಿದೆ.

ಕಳೆದ ವರ್ಷ ರು.14.02 ಕೋಟಿಯಿಂದ ಮೊತ್ತ ಈ ಬಾರಿ ರು.38.82 ಕೋಟಿಗೇರಿದೆ. ಇದೇ ವೇಳೆ, ತಾನು ರು.20 ಸಾವಿರಕ್ಕಿಂತ ಅಧಿಕ ದೇಣಿಗೆ ಪಡೆದಿಲ್ಲ ಎಂದು ಬಿಎಸ್ಪಿ ಹೇಳಿದೆ. ಈ ವರ್ಷ ಕಾಂಗ್ರೆಸ್ ರು.141.46 ಕೋಟಿ, ಸಿಪಿಎಂ ರು.3.42 ಕೋಟಿ, ಸಿಪಿಐ ರು.1.33 ಕೋಟಿ ಪಡೆದಿದೆ.

ಇದೇ ವೇಳೆ, ಕ್ಷೇತ್ರವಾರು ದೇಣಿಗೆಯ ಲೆಕ್ಕಾಚಾರ ನೋಡಿದರೆ ರಾಜಕೀಯ ಪಕ್ಷಗಳಿಗೆ ಒಟ್ಟಾರೆ ಬಂದಿರುವ ದೇಣಿಗೆಯ ಪೈಕಿ ಶೇ.92.61ರಷ್ಟು ಅಂದರೆ ರು.576.37 ಕೋಟಿ ಬಂದಿರುವುದು ಕಾರ್ಪೋರೇಟ್ ವಲಯದಿಂದ. ಇನ್ನು ವೈಯಕ್ತಿಕ ದೇಣಿಗೆಯ ರೂಪದಲ್ಲಿ ಶೇ.7.27 ಅಂದರೆ, ರು.45.23 ಕೋಟಿ ಸಂಗ್ರಹವಾಗಿದೆ.

Write A Comment