ರಾಷ್ಟ್ರೀಯ

ನ್ಯಾಶನಲ್ ಹೆರಾಲ್ಡ್ ಪ್ರಕರಣ: 19ರಂದು ಖುದ್ದು ಹಾಜರಾಗಿ – ಸೋನಿಯಾ, ರಾಹುಲ್‌ಗೆ ದಿಲ್ಲಿ ಹೈಕೋರ್ಟ್ ಆದೇಶ

Pinterest LinkedIn Tumblr

sonia3

ಹೊಸದಿಲ್ಲಿ, ಡಿ.9: ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸೆಂಬರ್ 19ರಂದು ನ್ಯಾಯಾಲಯದಲ್ಲಿ ಖುದ್ದು ಹಾಜರಾಗುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ದಿಲ್ಲಿ ಹೈಕೋರ್ಟ್ ಆದೇಶ ನೀಡಿದೆ.

ಹಿರಿಯ ವಕೀಲರಾದ ಅಭಿಷೇಕ್ ಮನು ಸಾಂಘ್ವಿ, ಹರಿನ್ ರಾವಲ್ ಹಾಗೂ ರಮೇಶ್ ಗುಪ್ತಾ ಅವರು ಇಬ್ಬರ ಪರವಾಗಿ ನ್ಯಾಯಾಲಯದಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿ, ಇಂದು ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಕೋರಿದ್ದರು.

ತಾಯಿ ಮತ್ತು ಮಗನ ವಿರುದ್ಧ ಹೊರಡಿಸಿದ್ದ ಸಮನ್ಸ್ ರದ್ದು ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಅವರು ಆ ಮುದ್ರಣಸಂಸ್ಥೆ ಮೇಲೆ ಹೇಗೆ ನಿಯಂತ್ರಣ ಪಡೆದರು ಎಂಬ ಪ್ರಶ್ನಾರ್ಹ ನಡತೆ ಬಗ್ಗೆ ತೀಕ್ಷ್ಣವಾಗಿ ಪ್ರಶ್ನಿಸಿತು.

ಸೋನಿಯಾ ಹಾಗೂ ರಾಹುಲ್ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಆದಷ್ಟು ಬೇಗ ಹಾಜರಾಗಲು ಉತ್ಸುಕರಾಗಿದ್ದಾರೆ. ನಮ್ಮ ಕೋರಿಕೆ ಮೇರೆಗೆ ಡಿಸೆಂಬರ್ 19ರ ದಿನಾಂಕ ನೀಡಲಾಗಿದೆ. ಅಮೆರಿಕದಲ್ಲಿರುವ ಒಬ್ಬ ಆರೋಪಿಯನ್ನು ಹೊರತುಪಡಿಸಿ ಉಳಿದೆಲ್ಲರೂ ಅಂದು ಮಧ್ಯಾಹ್ನ 3 ಗಂಟೆಗೆ ಹಾಜರಾಗುತ್ತಾರೆ ಎಂದು ಸಾಂಘ್ವಿ ವಿವರಿಸಿದರು.

ಈ ಮಧ್ಯೆ ಕಾಂಗ್ರೆಸ್ ಪಕ್ಷ ಸಂಸತ್ ಕಲಾಪಕ್ಕೆ ಅಡ್ಡಿ ಉಂಟುಮಾಡುತ್ತಿದೆ ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ನ್ಯಾಯಾಲಯದಲ್ಲಿ ಹಾಜರಾಗಲು ಸೂಚಿಸಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೂ, ಕೇಂದ್ರ ಸರಕಾರಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಅವರು ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಬಹುದು. ಆದರೆ ಸರಕಾರವನ್ನು ಇದಕ್ಕೆ ಹೊಣೆಮಾಡಲು ಹೇಗೆ ಸಾಧ್ಯ? ಕಾಂಗ್ರೆಸ್‌ನ ಈ ಕ್ರಮ ನ್ಯಾಯಸಮ್ಮತವಲ್ಲ ಹಾಗೂ ಬೇಜವಾಬ್ದಾರಿಯುತ ಕ್ರಮ. ಸತ್ಯವನ್ನು ಎದುರಿಸಲಾಗದೇ ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಸಂಸತ್ ಭವನದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್ ಸದಸ್ಯರಿಗೆ ದಿಕ್ಕು ತೋಚದಂತಾಗಿದೆ. ಈ ಕಾರಣಕ್ಕೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಜಕೀಯ ಸೇಡು ಅಡಗಿದೆ ಎಂದು ಆರೋಪಿಸಿ ಕಲಾಪಕ್ಕೆ ಅಡ್ಡಿಪಡಿಸಿದೆ. ಇದರಿಂದ ಉಭಯ ಸದನಗಳ ಕಲಾಪ ಮುಂದೂಡಬೇಕಾಯಿತು ಎಂದು ನಾಯ್ಡು ಹೇಳಿದರು.

‘ನಾನು ಇಂದಿರಾ ಸೊಸೆ, ಯಾವುದಕ್ಕೂ ಹೆದರುವುದಿಲ್ಲ’
ಹೊಸದಿಲ್ಲಿ, ಡಿ.8: ನಾನು ಇಂದಿರಾ ಗಾಂಧಿಯವರ ಸೊಸೆ. ಯಾರಿಗೂ ಹೆದರುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುಡುಗಿದರು.

ನ್ಯಾಶನಲ್ ಹೆರಾಲ್ಡ್ ಪ್ರಕರಣದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವಿಚಾರಣಾ ನ್ಯಾಯಾಲಯದ ಸಮನ್ಸ್ ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ತಿರಸ್ಕರಿಸಿದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಮೇಲಿನಂತೆ ಪ್ರತಿಕ್ರಿಯಿಸಿದರು. ಪ್ರಕರಣದ ಎಲ್ಲ ಏಳು ಮಂದಿ ಆರೋಪಿಗಳು ಡಿಸೆಂಬರ್ 19ರಂದು ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.

ರಾಜಕೀಯ ಸೇಡು: ರಾಹುಲ್
ನ್ಯಾಶನಲ್ ಹೆರಾಲ್ಡ್ ಪ್ರಕರಣದ ಹಿಂದೆ ರಾಜಕೀಯ ಸೇಡು ಅಡಗಿದೆ. ಇದು ಕೇಂದ್ರ ಸರಕಾರದ ಕಾರ್ಯ ವೈಖರಿಯಾಗಿದೆ. ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

ಯಾವುದೇ ವ್ಯಕ್ತಿ ಯಾರ ಸೊಸೆ ಅಥವಾ ಯಾರ ಅಳಿಯ ಎನ್ನುವುದನ್ನು ಕಾನೂನು ನೋಡುವುದಿಲ್ಲ.
-ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ

ಏನಿದು ನ್ಯಾಶನಲ್ ಹೆರಾಲ್ಡ್ ಹಗರಣ..?
ಈಗ ಮುಚ್ಚುಗಡೆಯಾಗಿರುವ ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ನಿಯಂತ್ರಣ ಪಡೆಯುವಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ವಂಚನೆ ಮತ್ತು ಅವ್ಯವಹಾರ ಎಸಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಸುಬ್ರಹ್ಮಣ್ಯನ್ ಸ್ವಾಮಿ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, ನ್ಯಾಶನಲ್ ಹೆರಾಲ್ಡ್‌ನ ಮಾಲಕ ಸಂಸ್ಥೆ ಎಜೆಎಲ್ ತನ್ನ ಬೃಹತ್ ಪ್ರಮಾಣದ 2,000 ಕೋಟಿ ಆಸ್ತಿಯಿಂದ ಸಾಲವನ್ನು ಮರುಪಾವತಿ ಮಾಡುತ್ತದೆ ಎಂದಾದರೆ ಅದಕ್ಕೆ 90 ಕೋಟಿ ರೂ. ಸಾಲ ನೀಡುವ ಅಗತ್ಯ ಏನಿತ್ತು ಎನ್ನುವುದನ್ನು ಕಾಂಗ್ರೆಸ್ ವಿವರಿಸಬೇಕು ಎಂದು ಸೂಚಿಸಿತ್ತು. ಈ ಮಧ್ಯೆ ಸುಬ್ರಹ್ಮಣ್ಯನ್‌ಸ್ವಾಮಿ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯೆಟ್ ಸಲ್ಲಿಸಿ, ಸೋನಿಯಾ ಹಾಗೂ ರಾಹುಲ್ ಸಲ್ಲಿಸಬಹುದಾದ ಯಾವುದೇ ಅರ್ಜಿಯನ್ನು ಏಕಪಕ್ಷೀಯವಾಗಿ ವಿಚಾರಣೆ ನಡೆಸಬಾರದು ಎಂದು ಕೋರಿದ್ದಾರೆ.

Write A Comment