ರಾಷ್ಟ್ರೀಯ

ಚೆನ್ನೈ ಪ್ರವಾಹ: ತಗ್ಗಿದ ನೀರು, ಪುನರ್ವಸತಿಯತ್ತ ಗಮನ

Pinterest LinkedIn Tumblr

channff

ಚೆನ್ನೈ: ಕಳೆದೊಂದು ವಾರದಿಂದ ಮಹಾಪ್ರಳಯದಲ್ಲಿ ಸಿಲುಕಿ ನಲುಗಿ ಹೋಗಿರುವ ಚೆನ್ನೈ ಮಹಾನಗರದಲ್ಲಿ ಸದ್ಯ ಮಳೆ ಇಳಿಮುಖವಾಗಿದ್ದು, ಜಲಾವೃತ ಪ್ರದೇಶಗಳಲ್ಲಿ ನೀರಿನ ಪ್ರಮಾಣ ನಿಧಾನವಾಗಿ ತಗ್ಗುತ್ತಿದೆ.

ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದರಲ್ಲಿ ಹಗಲು ರಾತ್ರಿ ಶ್ರಮಿಸುತ್ತಿರುವ ರಕ್ಷಣಾ ಸಿಬ್ಬಂದಿ ಅದರ ಜೊತೆಗೆ ತುಂಬಿರುವ ರಸ್ತೆ, ಮನೆ, ಕಟ್ಟಡಗಳಲ್ಲಿ ತುಂಬಿಕೊಂಡಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸುವಲ್ಲಿ ನಿರತರಾಗಿದ್ದಾರೆ. ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುವ ಭೀತಿ ದಟ್ಟವಾಗಿರುವುದರಿಂದ ತ್ವರಿತಗತಿಯಲ್ಲಿ  ಸ್ವಚ್ಛತಾ  ಕಾರ್ಯ ನಡೆಸಲಾಗುತ್ತಿದೆ.

ಚೆನ್ನೈ ಮಹಾನಗರ ಪಾಲಿಕೆ ಮತ್ತು ಇತರ ಸ್ಥಳೀಯ ಸಂಸ್ಥೆಗಳ ಕಾರ್ಮಿಕರು ಬಾಧಿತ ಪ್ರದೇಶಗಳಲ್ಲಿ ಹರಡಿರುವ ಅವಶೇಷಗಳನ್ನು ತೆರವುಗೊಳಿಸುವಲ್ಲಿ ಮಗ್ನರಾಗಿದ್ದಾರೆ.  ರಾಜ್ಯದ ಇತರ ಜಿಲ್ಲೆಗಳಿಂದಲೂ ಪೌರ ಕಾರ್ಮಿಕರನ್ನು ಈ ಕೆಲಸಕ್ಕಾಗಿ ಕರೆಸಿಕೊಳ್ಳಲಾಗಿದೆ.

ಭಾನುವಾರವೂ ನಗರದ ವಿವಿಧೆಡೆ ವ್ಯಾಪಕ ಮಳೆಯಾಗಿದೆ. ಇಂದು ಮುಂಜಾನೆಯಿಂದ ದಟ್ಟ ಬಿಸಿಲು ಬಂದಿದ್ದು ಹಲವು ಪ್ರದೇಶಗಳಲ್ಲಿ ಈಗಲೂ ನಿಂತಿರುವ ನೀರು ಒಣಗಿ ಹೋಗುವ ಭರವಸೆ ಜನರಲ್ಲಿ ಎದ್ದು ಕಾಣುತ್ತಿದೆ.

ಹಾಲು ಸೇರಿದಂತೆ ಅಗತ್ಯ ವಸ್ತುಗಳು ಜನಸಾಮಾನ್ಯರ ಕೈಗೆಟುಕದ ದರಕ್ಕೆ ಮಾರಾಟವಾಗುತ್ತಿರುವುದಕ್ಕೆ ಕಡಿವಾಣ ಹಾಕಲು ಈ ಕುರಿತು ದೂರು ನೀಡುವಂತೆ ಸಹಾಯವಾಣಿ ಸಂಖ್ಯೆಗಳನ್ನು ಘೋಷಿಸಲಾಗಿದೆ.

ಅತಿಸಾರ  ಮತ್ತು ಇತರ ಜಲಜನ್ಯ ಕಾಯಿಲೆಗಳು ಹರಡುವ ಭೀತಿ ಇರುವುದರಿಂದ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಔಷಧಿಗಳನ್ನು ವಿತರಿಸಲಾಗುತ್ತಿದೆ.

ರೈಲು ಮತ್ತು ಬಸ್ ಸೇವೆಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಇತ್ತೀಚಿಗೆ ಪ್ರಾರಂಭವಾದ ಮೆಟ್ರೋ ರೈಲು ಸೇವೆ ಎಂದಿನಂತೆ ಸುಗಮವಾಗಿ ಸಾಗಿದೆ.

ಚೆನ್ನೈ ವಿಮಾನ ನಿಲ್ಧಾಣದಿಂದ ವಿಮಾನ ಸೇವೆ ಸಹ ಮತ್ತೆ ಪ್ರಾರಂಭವಾಗಿದೆ.

Write A Comment