ರಾಷ್ಟ್ರೀಯ

ಸಚಿವ ವಿ.ಕೆ.ಸಿಂಗ್ ವಜಾಕ್ಕೆ ಒತ್ತಾಯಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ

Pinterest LinkedIn Tumblr

pqrನವದೆಹಲಿ: ಕೇಂದ್ರ ಸಚಿವ ವಿ.ಕೆ.ಸಿಂಗ್ ದಲಿತರ ಹತ್ಯೆಯನ್ನು ನಾಯಿಗಳಿಗೆ ಹೋಲಿಸಿರುವುದನ್ನು ವಿರೋಧಿಸಿ ಕೂಡಲೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರು.

ದಲಿತರು ಮತ್ತು ಶೋಷಿತರನ್ನು ಅಪಮಾನಗೊಳಿಸಿದ ಸಚಿವ ವಿ.ಕೆ.ಸಿಂಗ್ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಚಳಿಗಾಲದ ಅಧಿವೇಶನವನ್ನು ಅಸ್ತವ್ಯಸ್ಥಗೊಳಿಸುವುದಾಗಿ ವಿಪಕ್ಷಗಳು ಕೇಂದ್ರ ಸರಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿವೆ.

ಒಂದು ಸಮುದಾಯದ ವಿರುದ್ಧ ಕೇಂದ್ರ ಸಚಿವ ಸಿಂಗ್ ತೋರಿದ ವರ್ತನೆ ಕೀಳುಮಟ್ಟದ್ದಾಗಿದೆ. ಕೂಡಲೇ ಪ್ರಧಾನಿ ಮೋದಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಸಂಸದ ಜ್ಯೋತಿರಾಧೀತ್ಯ ಸಿಂಧಿಯಾ ಒತ್ತಾಯಿಸಿದ್ದಾರೆ.

ಕೇಂದ್ರ ಸಚಿವ ವಿ.ಕೆ.ಸಿಂಗ್ ಹೇಳಿಕೆಯಲ್ಲಿ ಯಾವುದೇ ಅಪಾರ್ಥವಿಲ್ಲ. ಯಾಕೆ, ರಾಹುಲ್ ಗಾಂಧಿ ವಿಷಯವನ್ನು ದೊಡ್ಡದಾಗಿ ಮಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಢಿ ಹೇಳಿದ್ದಾರೆ.

ಬಿಜೆಪಿ ಅಧಿಕಾರವಿರುವ ಹರಿಯಾಣಾದಲ್ಲಿ ಮನೆಗೆ ಬೆಂಕಿ ಬಿದ್ದು ಇಬ್ಬರು ದಲಿತ ಮಕ್ಕಳು ಜೀವಂತವಾಗಿ ದಹಿಸಿದ ಘಟನೆ ಕುರಿತಂತೆ ಸುದ್ದಿಗಾರರು ಸಚಿವ ವಿ.ಕೆ.ಸಿಂಗ್ ಅವರ ಪ್ರತಿಕ್ರಿಯೆ ಕೇಳಿದಾಗ, ಒಂದು ವೇಳೆ, ಯಾರಾದರೂ ನಾಯಿಗೆ ಕಲ್ಲು ಹೊಡೆದರೆ ಅದಕ್ಕೂ ಪ್ರಧಾನಿ ಮೋದಿ ಹೊಣೆಯೇ ಎಂದು ನೀಡಿದ ಹೇಳಿಕೆ ವಿವಾದವೆಬ್ಬಿಸಿತ್ತು.

ತಮ್ಮ ಹೇಳಿಕೆ ವಿವಾದದ ಬಿರುಗಾಳಿ ಎಬ್ಬಿಸಿದ್ದರಿಂದ ಎಚ್ಚೆತ್ತುಕೊಂಡ ಸಚಿವ ಸಿಂಗ್, ತಾವು ಯಾವುದೇ ಸಮುದಾಯಕ್ಕೆ ನೋವುಂಟು ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಉಲ್ಟಾ ಹೊಡೆದಿದ್ದರು. ಆದರೆ, ವಿಪಕ್ಷಗಳು ಅವರ ಸಮರ್ಥನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

Write A Comment