ರಾಷ್ಟ್ರೀಯ

9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 13 ವರ್ಷದ ಬಾಲಕಿ ಶಾಲಾ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ

Pinterest LinkedIn Tumblr

baby

ಹೈದರಾಬಾದ್: 13 ವರ್ಷದ ಬಾಲಕಿಯೊಬ್ಬಳು ಶಾಲಾ ಶೌಚಾಲಯದಲ್ಲಿಯೇ ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ನೆರೆಯ ಹೈದಾರಾಬಾದಿನಲ್ಲಿ ನಡೆದಿದೆ.

ಹೈದರಾಬಾದಿನ ಪ್ರತಿಷ್ಠಿತ ಪ್ರದೇಶ ಮಾಧಾಪುರ್ ನಲ್ಲಿರುವ ಜೆಡ್ ಪಿಹೆಚ್ ಎಸ್ ಎಂಬ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದ್ದು, 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿಯ ಸ್ನೇಹಿತೆಯರು ತಿಳಿಸಿರುವಂತೆ ತರಗತಿ ನಡೆಯುತ್ತಿದ್ದಾಗಲೇ ಬಾಲಕಿ ಹೆರಿಗೆ ನೋವನ್ನು ಅನುಭವಿಸತೊಡಗಿದ್ದು, ವಿದ್ಯಾರ್ಥಿನಿಗೆ ತನಗೆ ಏನಾಗುತ್ತಿದೆ ಎಂಬ ಅರಿವೇ ಇರಲಿಲ್ಲ. ತನಗೆ ಹೊಟ್ಟೆ ನೋವು ಬರುತ್ತಿದೆ ಎಂದು ವಿದ್ಯಾರ್ಥಿನಿಯು ತರಗತಿಯ ಶಿಕ್ಷಕಿಯಲ್ಲಿ ಹೇಳಿಕೊಂಡಾಗ ಆ ಶಿಕ್ಷಕಿಯು ಶೌಚಾಲಯಕ್ಕೆ ಹೋಗುವಂತೆ ಆಕೆಗೆ ಸೂಚಿಸಿದರು.

ಶೌಚಾಲಯಕ್ಕೆ ಹೋದ ಬಾಲಕಿ ಅಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದಾದ ಕೆಲ ನಿಮಿಷಗಳ ವರೆಗೂ ಶಾಲಾ ಶಿಕ್ಷಕರಿಗೆ ಶೌಚಾಲಯದಲ್ಲಿ ಏನಾಗುತ್ತಿದೆ ಎಂದು ತಿಳಿಯದೇ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಆದರೆ ಮಗು ಅಳುವಿನ ಶಬ್ದ ಕೇಳಿ ಎಚ್ಚೆತ್ತ ಶಿಕ್ಷಕರು ಶೌಚಾಲಯದತ್ತ ಓಡಿಬಂದು ನೋಡಿದಾಗ ಆಘಾತ ಕಾದಿತ್ತು. ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಳು.

ಕೂಡಲೇ ಶಾಲೆಯ ಆಡಳಿತಾಧಿಕಾರಿಗಳು ವಿದ್ಯಾರ್ಥಿನಿಯ ಹೆತ್ತವರಿಗೆ ಸುದ್ದಿ ಮುಟ್ಟಿಸಿದರು. ವಿಚಿತ್ರವೆಂದರೆ ಆ ಹೆತ್ತವರಿಗೂ ಕೂಡ ತಮ್ಮ ಮಗಳು ಗರ್ಭಿಣಿಯಾಗಿರುವ ವಿಚಾರ ತಿಳಿದಿರಲಿಲ್ಲವಂತೆ. ಘಟನೆ ಶನಿವಾರವೇ ನಡೆದಿದ್ದರೂ ಪ್ರಕರಣ ಬೆಳಕಿಗೆ ಬಂದಿರುವುದು ಮಾತ್ರ ಸೋಮವಾರ. ಪ್ರಸ್ತುತ ಬಾಲಕಿ ಮತ್ತು ಆಕೆಯ ಮಗು ಸುರಕ್ಷಿತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಟ್ಟೆಯನ್ನು ಶಾಲ್ ನಿಂದ ಮುಚ್ಚಿಕೊಳ್ಳುತ್ತಿದ್ದ ಬಾಲಕಿ!
ಬಾಲಕಿ ಗರ್ಭಿಣಿಯಾಗಿದ್ದು, ಅದೇ ಸ್ಥಿತಿಯಲ್ಲಿ ಶಾಲೆಗೆ ಆಗಮಿಸುತ್ತಿದ್ದರೂ ಶಾಲಾ ಶಿಕ್ಷಕರಿಗೆ ಈ ಬಗ್ಗೆ ಕೊಂಚವೂ ಅನುಮಾನವೇ ಬಂದಿರಲಿಲ್ಲವಂತೆ. ಮಾಧಾಪುರ ಸರ್ಕಾರಿ ಹೈಸ್ಕೂಲಿನ 13 ಶಿಕ್ಷಕಿಯರನ್ನು ಒಳಗೊಂಡ 20 ಮಂದಿ ಶಿಕ್ಷಕ ವರ್ಗಕ್ಕೆ ಈ ವಿದ್ಯಾರ್ಥಿನಿಯು ಗರ್ಭಿಣಿ ಎಂಬ ವಿಚಾರವೇ ಗೊತ್ತಿರಲಿಲ್ಲ. ವಿದ್ಯಾರ್ಥಿನಿಯು ಯಾವತ್ತೂ ಬೆಂಚಿನಲ್ಲಿ ಕುಳಿತುಕೊಳ್ಳುವಾಗ ತನ್ನ ಹೊಟ್ಟೆಯನ್ನು ಶಾಲಿನಿಂದ ಮುಚ್ಚಿಕೊಳ್ಳುತ್ತಿದ್ದಳು ಮತ್ತು ತನ್ನ ಶಾಲಾ ಬ್ಯಾಗನ್ನು ತನ್ನ ಮುಂದೆಯೇ ಇರಿಸಿಕೊಳ್ಳುತ್ತಿದ್ದಳು. ಇದರಿಂದ ನಮಗೆ ಆಕೆ ಗರ್ಭಿಣಿಯಾಗಿರುವುದು ತಿಳಿಯಲಿಲ್ಲ ಎಂದು ಶಾಲೆಯ ಶಿಕ್ಷಕಿಯರು ಹೇಳಿದ್ದಾರೆ.

ಬಾಲಕಿಯ ಅಕ್ಕನ ಹಣದ ದುರಾಸೆಗೆ ಬಲಿಯಾದ ಬಾಲಕಿ..!
ಇನ್ನು ಪೊಲೀಸ್ ಮೂಲಗಳ ಪ್ರಕಾರ ಪ್ರಸ್ತುತ ತಾಯಿಯಾಗಿರುವ ಬಾಲಕಿಯ ಈ ದಾರಣ ಸ್ಥಿತಿಗೆ ಬಾಲಕಿಯ ಅಕ್ಕ ಅರುಣ ಎಂಬಾಕೆಯೇ ಕಾರಣ ಎಂದು ಹೇಳಲಾಗುತ್ತಿದೆ. ಹಣದ ದುರಾಸೆಗೆ ಬಿದ್ದ ಅರುಣ್ ತನ್ನ ಸ್ವಂತ ತಂಗಿಯನ್ನು ಅತ್ಯಾಚಾರಕ್ಕೆ ಒಳಪಡಿಸುತ್ತಿದ್ದಳು. ಇದನ್ನೇ ತನ್ನ ಕ್ರೌರ್ಯಕ್ಕೆ ಬಳಸಿಕೊಂಡ ಮನೆಯ ಸಮೀಪದ ಧನುಷ್ ಎಂಬ ಯುವಕ ಕಳೆದ 2 ವರ್ಷದಿಂದ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಬಾಲಕಿ ಅಕ್ಕ ಅರುಣ ಮತ್ತು ಧನುಷ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅರುಣಳನ್ನು ಬಂಧಿಸಿದ್ದಾರೆ. ಬಾಲಕಿಯ ದಾರುಣ ಸ್ಥಿತಿಗೆ ಕಾರಣನಾದ ಧನುಷ್ ನಾಪತ್ತೆಯಾಗಿದ್ದಾನೆ. ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

Write A Comment