ರಾಷ್ಟ್ರೀಯ

ತೆಲಂಗಾಣ: ತೆರೆದ ಕೊಳವೆ ಬಾವಿಗೆ ಬಿದ್ದ 3 ವರ್ಷದ ಮಗು

Pinterest LinkedIn Tumblr

boreweb

ಸಂಗರೆಡ್ಡಿ/ತೆಲಂಗಾಣ (ಪಿಟಿಐ): ಮೂರು ವರ್ಷದ ಬಾಲಕನೊಬ್ಬ 40 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ತೆಲಂಗಾಣದ ಮೆದಕ್‌ ಜಿಲ್ಲೆಯ ಪುಲ್‌ಕಲ್‌ ಮಂಡಲ್‌ ವ್ಯಾಪ್ತಿಗೆ ಬರುವ ಬೊಮ್ಮರೆಡ್ಡಿ ಗುಡೆಂ ಹಳ್ಳಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಕೊಳವೆ ಬಾವಿಯಲ್ಲಿ ಸಿಲುಕಿರುವ ಬಾಲಕನನ್ನು ಮೇಲೆತ್ತಲು ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ.

ದಿನಗೂಲಿ ಕಾರ್ಮಿಕರ ಮಗನಾದ ರಾಕೇಶ್‌, ತನ್ನ ತಂದೆ–ತಾಯಿ ಕೆಲಸ ಮಾಡುತ್ತಿದ್ದ ಹೊಲದ ಪಕ್ಕದಲ್ಲಿ ಆಟವಾಡುತ್ತಿರುವಾಗ ಈ ಘಟನೆ ನಡೆದಿದೆ. ಕೊಳವೆ ಬಾವಿ ಕೊರೆಯಿಸಿದ್ದ ಜಮೀನು ಮಾಲೀಕ, ಅದನ್ನು ಉಪಯೋಗಿಸದೇ ಮುಚ್ಚದೇ ಹಾಗೇ ಬಿಟ್ಟಿದ್ದರು ಎಂದು ಪುಲ್‌ಕಲ್‌ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಸತ್ಯನಾರಾಯಣ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ 8:45ರ ಸುಮಾರಿಗೆ ಘಟನೆ ನಡೆದಿದೆ. ಹೊಲದಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಣ್ಮರೆಯಾದಾಗ ದಿಗಿಲುಗೊಂಡ ಪೋಷಕರು ಸುತ್ತ ಮುತ್ತ ಹುಡುಕತೊಡಗಿದರು. ಸ್ವಲ್ಪದರದಲ್ಲೇ ಕೊಳವೆಬಾವಿಯಿಂದ ಮಗುವಿನ ಅಳು ಕೇಳಿಸಿತು ಎಂದು ಅವರು ಹೇಳಿದ್ದಾರೆ.

ಪೊಲೀಸರು, ರಕ್ಷಣಾ ಸಿಬ್ಬಂದಿ, ಮತ್ತು ವೈದ್ಯರ ತಂಡ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಮಗುವಿಗೆ ಉಸಿರಾಟಕ್ಕೆ ಅನುಕೂಲವಾಗುವಂತೆ ಕೊಳವೆ ಮೂಲಕ ಆಮ್ಲಜನಕ ಪೂರೈಸಲಾಗುತ್ತಿದೆ . ಕೊಳವೆ ಬಾವಿ ಸುತ್ತ ಇರುವ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.

Write A Comment