ರಾಷ್ಟ್ರೀಯ

26ರಿಂದ ಚಳಿಗಾಲದ ಅಧಿವೇಶನ: 3 ಮಹತ್ವದ ವಿಧೇಯಕಗಳ ಮಂಡನೆ ಸಾಧ್ಯತೆ

Pinterest LinkedIn Tumblr

Parliamentಹೊಸದಿಲ್ಲಿ, ನ.22: ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ಕೈಬಿಡಲು ನಿರ್ಧರಿಸಿರುವ ಕೇಂದ್ರ ಸರಕಾರವು ನವೆಂಬರ್ 26ರಂದು ಆರಂಭಗೊಳ್ಳುವ ಸಂಸತ್ ಅಧಿವೇಶನದಲ್ಲಿ ಜಿಎಸ್‌ಟಿ ಸೇರಿದಂತೆ ಮೂರು ವಿಧೇಯಕಗಳನ್ನು ತ್ವರಿತವಾಗಿ ಮಂಡಿಸಲು ಸಿದ್ಧತೆ ನಡೆಸುತ್ತಿದೆ.

ಚೆಕ್ ಬೌನ್ಸ್ ಪ್ರಕರಣಗಳನ್ನು ನಿಭಾಯಿಸುವ ಕುರಿತಾದ 2015ರ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ (ತಿದ್ದುಪಡಿ) ವಿಧೇಯಕ ಹಾಗೂ ಹೈಕೋರ್ಟ್‌ಗಳಲ್ಲಿ ವಾಣಿಜ್ಯ ಪ್ರಕರಣಗಳ ವಿಚಾರಣೆಗೆಂದೇ ಪ್ರತ್ಯೇಕ ಪೀಠಗಳನ್ನು ರಚಿಸಲು ಅವಕಾಶ ನೀಡುವ ‘ಹೈಕೋರ್ಟ್ ವಾಣಿಜ್ಯ ವಿಧೇಯಕ -2015ನ್ನು’ ಸರಕಾರವು ಉಭಯ ಸದನಗಳಲ್ಲಿ ಮಂಡಿಸಲಿದೆ.

ಸಂಧಾನದ ಮೂಲಕ ವ್ಯಾಜ್ಯಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಉದ್ದೇಶದ ‘ಮಧ್ಯಸ್ಥಿಕೆ ಹಾಗೂ ಸಂಧಾನ (ತಿದ್ದುಪಡಿ)’ ವಿಧೇಯಕವನ್ನು ಕೂಡಾ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು. ಭೂಸ್ವಾಧೀನ ವಿಧೇಯಕ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರತಿಪಕ್ಷಗಳು ಒಗ್ಗಟ್ಟಾಗಿ ಸಂಸತ್‌ನಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಪರಿಣಾಮವಾಗಿ ಕಳೆದ ಮುಂಗಾರು ಅಧಿವೇಶನವು ಹೆಚ್ಚುಕಡಿಮೆ ಸಂಪೂರ್ಣ ವ್ಯರ್ಥವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಲದ ಚಳಿಗಾಲದ ಅಧಿವೇಶನದಲ್ಲಿ ಕಡಿಮೆ ವಿವಾದವಿರುವ ವಿಧೇಯಕಗಳನ್ನು ಮಾತ್ರ ಮಂಡಿಸುವ ಕಾರ್ಯತಂತ್ರವನ್ನು ಸರಕಾರವು ರೂಪಿಸುತ್ತಿದೆ.

ಈ ಮಧ್ಯೆ ನಿರ್ಣಾಯಕವಾದ ಸರಕು ಹಾಗೂ ಸೇವಾ ವಿಧೇಯಕ (ಜಿಎಸ್‌ಟಿ )ವನ್ನು ತಾನು ವಿರೋಧಿಸಲಾರೆನೆಂದು ಕಾಂಗ್ರೆಸ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಆ ವಿಧೇಯಕಕ್ಕೆ ಸದನದ ಅನುಮೋದನೆಯನ್ನು ಪಡೆಯಲು ಎನ್‌ಡಿಎ ಸರಕಾರವು ಸೂಕ್ತ ಮಾರ್ಗೋಪಾಯಗಳನ್ನು ಹುಡುಕುತ್ತಿದೆ.

Write A Comment