ಹೊಸದಿಲ್ಲಿ,ನ.19: ತನ್ನ ರಾಷ್ಟ್ರೀಯತೆಯನ್ನು ಪ್ರಶ್ನಿಸಿ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿಯವರು ಮಾಡಿರುವ ಆರೋಪಕ್ಕೆ ಇಂದಿಲ್ಲಿ ತಿರುಗೇಟು ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರು ತನ್ನ ಆಪ್ತರ ಮೂಲಕ ತನ್ನ ಮೇಲೆ ‘ಕೆಸರೆರಚುತ್ತಿದ್ದಾರೆ ’ಎಂದು ಆಪಾದಿಸಿದರಲ್ಲದೆ, ತಾನು ತಪ್ಪು ಮಾಡಿದ್ದರೆ ತನ್ನನ್ನು ಜೈಲಿಗೆ ತಳ್ಳುವಂತೆ ಸರಕಾರಕ್ಕೆ ಸವಾಲೆಸೆದರು.
ಇಂದಿರಾ ಗಾಂಧಿಯವರ 98ನೆಯ ಜನ್ಮ ದಿನಾಚರಣೆ ಸಂದರ್ಭ ಯುವ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಆರೆಸ್ಸೆಸ್ ಮತ್ತು ಬಿಜೆಪಿಯ ಜನರು ನನ್ನ ಅಜ್ಜಿ,ತಂದೆಯ ಮೇಲೆ… ಅಷ್ಟೇ ಏಕೆ, ನನ್ನ ತಾಯಿಯ ಮೇಲೂ ಕೆಸರೆರಚುತ್ತಿದ್ದನ್ನು ನಾನು ಬಾಲ್ಯದಿಂದಲೇ ನೋಡುತ್ತಾ ಬಂದಿದ್ದೇನೆ. ನನ್ನ ವಿರುದ್ಧ ವಿವಿಧ ಬಗೆಯ ಆರೋಪಗಳನ್ನು ಮಾಡಲಾಗಿದೆ. ಮೋದಿಜಿಯವರೇ,ಈಗ ನಿಮ್ಮದೇ ಸರಕಾರವಿದೆ. ನಿಮ್ಮ ತನಿಖಾ ಸಂಸ್ಥೆಗಳ ಮೂಲಕ ನನ್ನ ವಿರುದ್ಧ ತನಿಖೆ ನಡೆಸಿ ತಪ್ಪು ಕಂಡು ಬಂದರೆ ನನ್ನನ್ನು ಜೈಲಿಗೆ ತಳ್ಳಿ. ನಿಮ್ಮ ಆಪ್ತರ ಮೂಲಕ ನನ್ನ ಮತ್ತು ನನ್ನ ಕುಟುಂಬದ ಮೇಲೆ ಕೆಸರೆರಚುವುದನ್ನು ನಿಲ್ಲಿಸಿ.ನೀವೀಗ ಪ್ರತಿಪಕ್ಷದಲ್ಲಿಲ್ಲ, ನೀವೀಗ ಸರಕಾರದಲ್ಲಿದ್ದೀರಿ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರ ಭಾರೀ ಕರತಾಡನಗಳ ನಡುವೆ ಹೇಳಿದರು.