ರಾಷ್ಟ್ರೀಯ

ಕೇಂದ್ರ ನೌಕರರಿಗೆ ಬಂಪರ್‌: ಶೇ.16ರಷ್ಟು ವೇತನ ಹೆಚ್ಚಳ: 18,000ರೂ.ಕನಿಷ್ಠ ವೇತನ; ಏಳನೇ ವೇತನ ಆಯೋಗದ ಶಿಫಾರಸು

Pinterest LinkedIn Tumblr

Salaryಹೊಸದಿಲ್ಲಿ,ನ.19: ನ್ಯಾ.ಎ.ಕೆ.ಮಾಥುರ್ ನೇತೃತ್ವದ ಏಳನೇ ವೇತನ ಆಯೋಗವು ತನ್ನ ವರದಿಯನ್ನು ಗುರುವಾರ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಸಲ್ಲಿಸಿದೆ. 50 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರ ವೇತನವನ್ನು ಶೇ.16ರಷ್ಟು ಹೆಚ್ಚಿಸುವಂತೆ ಅದು ಶಿಫಾರಸು ಮಾಡಿದೆ.

ಆಯೋಗದ ಶಿಫಾರಸುಗಳು ಸಂಪುಟದ ಮುಂದೆ ಮಂಡನೆಯಾಗಲಿದ್ದು, 2016,ಜ.1ರಿಂದ ಜಾರಿಗೊಳ್ಳುವ ಸಾಧ್ಯತೆಯಿದೆ.ಕನಿಷ್ಠ ವೇತನವನ್ನು ಮಾಸಿಕ 18,000ರೂ.ಗೆ ನಿಗದಿಗೊಳಿಸುವಂತೆ ಆಯೋಗವು ಶಿಫಾರಸು ಮಾಡಿದೆ. ಉನ್ನತ ಶ್ರೇಣಿಯಲ್ಲಿ 2.25ಲ.ರೂ.ಮತ್ತು ಸಂಪುಟ ಕಾರ್ಯದರ್ಶಿ ಮತ್ತು ಅದೇ ದರ್ಜೆಯ ಇತರರಿಗೆ 2.50ಲ.ರೂ.ಗರಿಷ್ಠ ಮಾಸಿಕ ವೇತನವನ್ನು ನಿಗದಿಗೊಳಿಸುವಂತೆಯೂ ಅದು ಶಿಫಾರಸು ಮಾಡಿದೆ.ಶೇಕಡಾವಾರು ಲೆಕ್ಕದಲ್ಲಿ ವೇತನ,ಭತ್ಯೆಗಳು ಮತ್ತು ಪಿಂಚಣಿಗಳಲ್ಲಿ ಏರಿಕೆಯು ಶೇ.23.55ರಷ್ಟಾಗಲಿದೆ.ಇದರಲ್ಲಿ ವೇತನದಲ್ಲಿ ಏರಿಕೆಯು ಶೇ.16,ಭತ್ಯೆಗಳಲ್ಲಿ ಶೇ.63 ಮತ್ತು ಪಿಂಚಣಿಯಲ್ಲಿನ ಏರಿಕೆಯು ಶೇ.24ರಷ್ಟಿದೆ ಎಂದು ವಿತ್ತ ಸಚಿವಾಲಯವು ಹೇಳಿದೆ.2008ರಲ್ಲಿ ಆರನೇ ವೇತನ ಆಯೋಗದ ಶಿಫಾರಸುಗಳು ಜಾರಿಗೊಂಡಾಗ ಸರಕಾರಿ ನೌಕರರು ಶೇ.35ರಷ್ಟು ಏರಿಕೆಯನ್ನು ಪಡೆದಿದ್ದರು.

ವೇತನಗಳಲ್ಲಿ ಏರಿಕೆಯು ದೇಶೀಯ ಆರ್ಥಿಕತೆಯಲ್ಲಿ ಬಳಕೆದಾರ ಆಧಾರಿತ ಚೇತರಿಕೆಗೆ ಅವಕಾಶ ಕಲ್ಪಿಸಲಿದೆ ಎಂದು ಆರ್ಥಿಕ ತಜ್ಞರು ನಿರೀಕ್ಷಿಸಿದ್ದಾರೆ. ಕೈಗೆಟಕುವ ಬೆಲೆಗಳಲ್ಲಿ ಮನೆಗಳು,ಕಾರು ಮತ್ತು ದ್ವಿಚಕ್ರ ವಾಹನಗಳು,ಇಲೆಕ್ಟ್ರಾನಿಕ್ ವಸ್ತುಗಳಂತಹ ಗೃಹಬಳಕೆ ವಸ್ತುಗಳ ಮಾರಾಟ ಹೆಚ್ಚುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಇದೇ ವೇಳೆ ವೇತನ ಏರಿಕೆಯು ಹಣದುಬ್ಬರ ಮತ್ತು ಹಣಕಾಸು ಒತ್ತಡವನ್ನು ಹೆಚ್ಚಿಸುತ್ತದೆ ಎಂದೂ ನಿರೀಕ್ಷಿಸಲಾಗಿದೆ.ಕೇಂದ್ರ ಸರಕಾರವು ತನ್ನ ನೌಕರರ ವೇತನ ಶ್ರೇಣಿ ಪರಿಷ್ಕರಣೆಗಾಗಿ ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸುತ್ತದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಅದರ ಶಿಫಾರಸುಗಳು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಅನುಷ್ಠಾನಗೊಳ್ಳುತ್ತವೆ.ಗುರುವಾರ ವರದಿ ಸಲ್ಲಿಕೆಯಾದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, ವೇತನ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕಾಗಿ ವೆಚ್ಚ ಕಾರ್ಯದರ್ಶಿಗಳ ಅಧೀನದಲ್ಲಿ ಸಚಿವಾಲಯವೊಂದನ್ನು ಶೀಘ್ರವೇ ರಚಿಸಲಾಗುವುದು. ಪ್ರತ್ಯೇಕವಾಗಿ ವಿವಿಧ ಇಲಾಖೆಗಳ ಅಧಿಕಾರಯುತ ಸಮಿತಿಯೊಂದು ಶಿಫಾರಸುಗಳನ್ನು ಪರಿಶೀಲಿಸಲಿದೆ ಎಂದು ತಿಳಿಸಿದರು.ಶಿಫಾರಸುಗಳನ್ನು ತ್ವರಿತವಾಗಿ ಪರಿಶೀಲಿಸಿದ ಬಳಿಕ ಸರಕಾರವು ಅಂತಿಮ ನಿರ್ಧಾರವೊಂದನ್ನು ಕೈಗೊಳ್ಳಲಿದೆ ಎಂದರು.

Write A Comment