ರಾಷ್ಟ್ರೀಯ

ಬಟಾಣಿಯೂ ದುಬಾರಿ: ಕೆ.ಜಿ.ಗೆ 160 ರೂ.: ಸಾರ್ವಕಾಲಿಕ ಗರಿಷ್ಠ ಏರಿಕೆ

Pinterest LinkedIn Tumblr

green-peasಚಂಡೀಗಡ, ನ.18: ಈರುಳ್ಳಿ ಹಾಗೂ ಟೊಮ್ಯಾಟೊ ಬಳಿಕ ಬಟಾಣಿ ಬೆಲೆಯೂ ಗಗನಕ್ಕೇರಿದ್ದು, ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಪಂಜಾಬ್ ಹಾಗೂ ಹರ್ಯಾಣಗಳಲ್ಲಿ ಬಟಾಣಿ ಬೆಲೆಯು ಪ್ರತಿ ಕೆ.ಜಿ.ಗೆ 160 ರೂ.ಆಗಿದ್ದು, ಇದು ಸಾರ್ವಕಾಲಿಕ ಗರಿಷ್ಠ ಏರಿಕೆಯಾಗಿದೆ.

ಕೆಲವೇ ದಿನಗಳ ಹಿಂದೆ ಪ್ರತಿ ಕೆ.ಜಿ.ಗೆ 90ರಿಂದ 100 ರೂ. ನಡುವೆ ಮಾರಾಟವಾಗುತ್ತಿದ್ದ ಬಟಾಣಿ, ಇಂದು 160 ರೂ.ಗೆ ತಲುಪಿದ್ದು, ಸಾರ್ವಕಾಲಿಕ ಗರಿಷ್ಠ ಏರಿಕೆಯನ್ನು ಕಂಡಿದೆಯೆಂದು ಚಂಡೀಗಡದ ಸಗಟು ಮಾರುಕಟ್ಟೆಯ ವ್ಯಾಪಾ ರಿಯೊಬ್ಬರು ತಿಳಿಸಿದ್ದಾರೆ.

ಶೀತಲೀಕರಿಸಲ್ಪಟ್ಟ ಬಟಾಣಿಯ ಬೇಡಿಕೆಯಲ್ಲಿ ದಿಢೀರ್ ಹೆಚ್ಚಳವಾಗಿರುವುದೇ ಬೆಲೆ ಹೆಚ್ಚಳಕ್ಕೆ ಕಾರಣವೆಂದು ಅವರು ಹೇಳಿದ್ದಾರೆ. ಶೀತಲೀಕರಿಸಿದ ಸ್ಥಿತಿಯಲ್ಲಿರುವ ಬಟಾಣಿಗಳು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 130-190 ರೂ.ಬೆಲೆಗೆ ಮಾರಾಟವಾಗುತ್ತಿದೆ. ಈ ಮಧ್ಯೆ ಟೊಮೆಟೊ ಬೆಲೆಯೇರಿಕೆ ಇನ್ನೂ ಮುಂದುವರಿದಿದ್ದು, ಪ್ರತಿ ಕೆ.ಜಿ.ಗೆ 60 ರೂ.ನಲ್ಲಿ ಸ್ಥಿರಗೊಂಡಿದೆ. ಕೇವಲ ಒಂದು ವಾರದ ಹಿಂದೆ ಕೆ.ಜಿ.ಗೆ 35 ರೂ. ಇದ್ದ ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವುದು ಜನಸಾಮಾನ್ಯರನ್ನು ಕಂಗಾಲುಗೊಳಿಸಿದೆ.

ಇತರ ಸಾಮಾನ್ಯ ತರಕಾರಿಗಳ ಬೆಲೆಯಲ್ಲೂ ತೀವ್ರವಾದ ಏರಿಕೆಯಾಗಿದೆ.ಸಾಮಾನ್ಯವಾಗಿ ಕೆ.ಜಿ.ಗೆ 40-50 ರೂ.ಗೆ ಮಾರಾಟವಾಗುತ್ತಿರುವ ಕ್ಯಾರೆಟ್ ಧಾರಣೆಗೆ ಈಗ 70 ರೂ.ಗೆ ತಲುಪಿದೆ. ಆದಾಗ್ಯೂ ನೀರುಳ್ಳಿ ಬೆಲೆಯು ನಿಧಾನವಾಗಿ ಇಳಿಮುಖವಾಗತೊಡಗಿದ್ದು, ಕೆ.ಜಿ.ಗೆ 50 ರೂ.ನಿಂದ 25 ರೂ.ಗೆ ಕುಸಿದಿದೆ. ಬಟಾಟೆ ಧಾರಣೆಯಲ್ಲಿಯೂ ಕುಸಿತ ಕಂಡುಬಂದಿದ್ದು, 25 ರೂ.ನಿಂದ 15 ರೂ.ಗೆ ಇಳಿದಿದೆ.

ಮಾರುಕಟ್ಟೆಗೆ ಹೊಸ ಬಟಾಟೆ ಕೊಯ್ಲು ಆಗಮಿಸತೊಡಗಿದ ಹಿನ್ನೆಲೆಯಲ್ಲಿ ಧಾರಣೆಯಲ್ಲಿ ಕುಸಿತ ಕಂಡುಬಂದಿದೆಯೆನ್ನಲಾಗಿದೆ. ಮುಂದಿನ ತಿಂಗಳು ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆಯಾಗಲಿರುವುದರಿಂದ ತರಕಾರಿ ದರಗಳಲ್ಲಿ ಸ್ಥಿರತೆ ಕಂಡುಬರುವ ಸಾಧ್ಯತೆಯಿದೆಯೆಂದು ಸಗಟು ವ್ಯಾಪಾರಿಗಳು ತಿಳಿಸಿದ್ದಾರೆ.

Write A Comment