ರಾಷ್ಟ್ರೀಯ

ಟೊಮ್ಯಾಟೊ ಬೆಲೆ ಗಗನಕ್ಕೆ: ಕೆ.ಜಿ.ಗೆ 62 ರೂ.

Pinterest LinkedIn Tumblr

tomatoesಹೊಸದಿಲ್ಲಿ, ನ.17: ರಾಜಧಾನಿ ದಿಲ್ಲಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಟೊಮ್ಯಾಟೊ ಬೆಲೆ ಶೇ.50ರಷ್ಟು ಏರಿಕೆಯನ್ನು ಕಂಡಿದ್ದು, ಪ್ರತಿ ಕೆ.ಜಿ.ಗೆ 62 ರೂ. ಆಗಿದೆ. ಮಾರುಕಟ್ಟೆಗೆ ಟೊಮ್ಯಾಟೊ ಪೂರೈಕೆ ತೀವ್ರವಾಗಿ ಕುಸಿದಿರುವುದೇ ಬೆಲೆಯೇರಿಕೆಗೆ ಕಾರಣವೆನ್ನಲಾಗಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಹೊಸದಿಲ್ಲಿಯಲ್ಲಿ ಕಳೆದ ತಿಂಗಳು ಕೆ.ಜಿ.ಗೆ 41 ರೂ.ನಂತೆ ಮಾರಾಟವಾಗುತ್ತಿದ್ದ ಟೊಮ್ಯಾಟೊ,ಈ ವಾರ 62 ರೂ.ಗೆ ಜಿಗಿದಿದೆ. ಹಾಗೆಯೇ ದೇಶಾದ್ಯಂತ ಎಲ್ಲ ಪ್ರಮುಖ ಮಾರುಕಟ್ಟೆ ಕೇಂದ್ರಗಳಲ್ಲಿ ಟೊಮ್ಯಾಟೊದ ಸರಾಸರಿ ಧಾರಣೆಯು ಪ್ರತಿ ಕೆ.ಜಿ.ಗೆ 30 ರೂ.ನಿಂದ 42 ರೂ.ಗೆ ಏರಿದೆ.
ಆದಾಗ್ಯೂ, ಕಳೆದ ಎರಡು ದಿನಗಳಲ್ಲಿ ಟೊಮ್ಯಾಟೊ ಪೂರೈಕೆಯಲ್ಲಿ ಹೆಚ್ಚಳವಾಗಿರುವುದರಿಂದ ಸಗಟು ಮಾರುಕಟ್ಟೆಯಲ್ಲಿ ಬೆಲೆ ಇಳಿಮುಖವಾಗತೊಡಗಿದೆಯೆಂದು ಹೊಸದಿಲ್ಲಿಯ ಆಝಾದ್‌ಪುರ್ ಮಂಡಿಯ ವರ್ತಕರು ತಿಳಿಸಿದ್ದಾರೆ.
‘‘ಕಳೆದ ವಾರ ಟೊಮ್ಯಾಟೊ ಪೂರೈಕೆಯಲ್ಲಿ ತೀವ್ರ ಕುಸಿತವುಂಟಾಗಿತ್ತು, ಇದರ ಜೊತೆಗೆ ಹಬ್ಬದ ಋತುವೂ ಇದ್ದ ಕಾರಣ ಮಾರುಕಟ್ಟೆಗೆ ರಜೆಯಿತ್ತು. ಇದರ ಪರಿಣಾಮವಾಗಿ ಟೊಮ್ಯಾಟೊ ಬೆಲೆ ಗಗನಕ್ಕೇರಿದೆ’’ ಎಂದು ಆಝಾದ್‌ಪುರ್ ಮಂಡಿಯ ಟೊಮ್ಯಾಟೊ ವ್ಯಾಪಾರಿ ಸುಭಾಷ್ ಚುಕ್ ತಿಳಿಸಿದ್ದಾರೆ.
ಆದರೆ ಸಗಟು ಮಾರುಕಟ್ಟೆಯಲ್ಲಿ ಸೋಮವಾರ ಪ್ರತಿ ಕೆ.ಜಿ.ಗೆ 30-35 ರೂ.ಗೆ ಮಾರಾಟವಾಗುತ್ತಿದ್ದ ಉನ್ನತ ಗುಣಮಟ್ಟದ ಟೊಮ್ಯಾಟೊ ಬೆಲೆ ಈಗ ಪ್ರತಿ ಕೆ.ಜಿ.ಗೆ 20-25 ರೂ. ಆಗಿದೆಯೆಂದು ಚುಕ್ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಟೊಮ್ಯಾಟೊದ ಪೂರೈಕೆಯಲ್ಲಿ ಸುಧಾರಣೆ ಕಂಡುಬರಲಿದ್ದು, ಧಾರಣೆಯು ಇನ್ನಷ್ಟು ಕುಸಿಯುವ ನಿರೀಕ್ಷೆಯಿದೆಯೆಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ ಹೊಸದಿಲ್ಲಿಯ ಮಾರುಕಟ್ಟೆಯಲ್ಲಿ ಈರುಳ್ಳಿಯ ಪೂರೈಕೆಯಲ್ಲಿ ಹೆಚ್ಚಳವಾಗಿರುವುದರಿಂದ ಅದರ ಬೆಲೆ ನಿಧಾನವಾಗಿ ಕುಸಿಯತೊಡಗಿದೆ. ಕಳೆದ ವಾರ ಪ್ರತಿ ಕೆ.ಜಿ.ಗೆ 57 ರೂ.ಗೆ ಮಾರಾಟವಾಗುತ್ತಿದ್ದ ಈರುಳ್ಳಿ ಇಂದು 43 ರೂ.ಗೆ ಕುಸಿದಿದೆ.
ಈರುಳ್ಳಿ ಹೊಸ ಫಸಲು ಮಾರುಕಟ್ಟೆಗೆ ಆಗಮಿಸತೊಡಗಿರುವುದರಿಂದ ಮುಂಬರುವ ದಿನಗಳಲ್ಲಿ ಬೆಲೆ ಇನ್ನಷ್ಟು ಕುಸಿಯಲಿದೆಯೆಂಬ ನಿರೀಕ್ಷೆಯನ್ನು ವ್ಯಾಪಾರಿಗಳು ವ್ಯಕ್ತಪಡಿಸಿದ್ದಾರೆ.

Write A Comment