ರಾಷ್ಟ್ರೀಯ

ವಿರೋಧವನ್ನು ಚರ್ಚೆಯ ಮೂಲಕ ಅಭಿವ್ಯಕ್ತಿಸಿ: ರಾಷ್ಟ್ರಪತಿ

Pinterest LinkedIn Tumblr

Pranava_ಹೊಸದಿಲ್ಲಿ, ನ.16: ವಿರೋಧವನ್ನು ಚರ್ಚೆ ಹಾಗೂ ಮಾತುಕತೆಗಳ ಮೂಲಕ ವ್ಯಕ್ತಪಡಿಸಬೇಕು. ಭಾವನೆಗಳು ‘ಕಾರಣದ ಮೇಲೆ ಸವಾರಿ ಮಾಡಲು’ ಅವಕಾಶ ನೀಡಬಾರದೆಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಇಂದು ಹೇಳಿದರು. ‘ಅಸಹಿಷ್ಣುತೆ’ಯ ಕುರಿತು ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

‘ಸೂಕ್ಷ್ಮ ಮನಸ್ಸುಗಳು’ ಕೆಲವು ವೇಳೆ ಸಮಾಜದ ಕೆಲವು ಘಟನೆಗಳಿಂದ ವಿಚಲಿತಗೊಳ್ಳುತ್ತವೆಂದು ಉಲ್ಲೇಖಿಸಿದ ಮುಖರ್ಜಿ, ಅಂತಹ ಘಟನೆಗಳ ಬಗ್ಗೆ ಸಮತೋಲಿತ ಕಳವಳ ವ್ಯಕ್ತಪಡಿಸಬೇಕೆಂದು ಸಲಹೆ ನೀಡಿದರು.

ರಾಷ್ಟ್ರೀಯ ಪತ್ರಿಕಾ ದಿವಸದ ಅಂಗವಾಗಿ ಇಲ್ಲಿ ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ರಾಷ್ಟ್ರಪತಿ, ಸೂಕ್ಷ್ಮ ಮನಸ್ಸುಗಳು ಕೆಲವು ವೇಳೆ ಸಮಾಜದ ಕೆಲವು ಘಟನೆಗಳಿಂದ ವಿಚಲಿತಗೊಳ್ಳುತ್ತವೆ. ಆದರೆ, ಅಂತಹ ಘಟನೆಗಳ ಬಗ್ಗೆ ಕಳವಳದ ಅಭಿವ್ಯಕ್ತಿಯು ಸಮತೋಲಿತವಾಗಿರ ಬೇಕು. ಭಾವನೆಗಳು ಕಾರಣವನ್ನು ಆಳಲು ಅವಕಾಶ ನೀಡ ಬಾರದು. ವಿರೋಧವನ್ನು ಚರ್ಚೆ ಹಾಗೂ ಮಾತುಕತೆಯ ಮೂಲಕ ಅಭಿವ್ಯಕ್ತಿಸಬೇಕು ಎಂದರು.

ಹೆಮ್ಮೆಯ ಭಾರತೀಯರಾಗಿ ನಾವು ಭಾರತದ ಕಲ್ಪನೆಯಲ್ಲಿ, ವೌಲ್ಯಗಳಲ್ಲಿ ಹಾಗೂ ನಮ್ಮ ಸಂವಿಧಾನ ಸ್ಥಾಪಿಸಿರುವ ಸಿದ್ಧಾಂತಗಳ ಮೇಲೆ ಭರವಸೆಯಿರಿಸಬೇಕು. ಅಂತಹ ಅಗತ್ಯ ಬಂದಾಗ ಭಾರತವು ಸ್ವಯಂ ಸರಿಪಡಿಸಿಕೊಳ್ಳಲು ಸದಾ ಶಕ್ತವಾಗಿದೆಯೆಂದು ಅವರು, ‘ಭಾವನೆಗಳ ಅಭಿವ್ಯಕ್ತಿಯ ಮಾಧ್ಯಮವಾಗಿ ವ್ಯಂಗ್ಯ ಚಿತ್ರಗಳು ಹಾಗೂ ರೇಖಾಚಿತ್ರಗಳ ಪರಿಣಾಮ ಹಾಗೂ ಪ್ರಾಮುಖ್ಯ’ ಎಂಬ ವಿಷಯದ ಕುರಿತು ಮಾತನಾಡುತ್ತ ಹೇಳಿದರು.

ಮುಖರ್ಜಿ ಯಾವುದೇ ನಿರ್ದಿಷ್ಟ ಘಟನೆಯ ಕುರಿತು ಉಲ್ಲೇಖಿಸದಿದ್ದರೂ, ‘ಅಸಹಿಷ್ಣುತೆ’ಯ ಪ್ರತಿಫಲನವೆಂದು ಅಭಿಪ್ರಾಯಿಸಲಾಗಿರುವ ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಪ್ರಾಮುಖ್ಯ ಪಡೆದಿದೆ.

ಕಾರ್ಯಕ್ರಮದಲ್ಲಿ ಅವರು, ಆರ್.ಕೆ. ಲಕ್ಷ್ಮಣ್ ಹಾಗೂ ರಾಜೀಂದರ್ ಪುರಿಯವರಂತಹ ದಂತಕತೆ ವ್ಯಂಗ್ಯ ಚಿತ್ರಕಾರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಜವಾಹರಲಾಲ್ ನೆಹರೂರವರನ್ನು ಉಲ್ಲೇಖಿಸಿದ ಮುಖರ್ಜಿ, ವ್ಯಂಗ್ಯ ಚಿತ್ರಗಳಲ್ಲಿ ತನ್ನನ್ನೂ ಬಿಡದಂತೆ ಅವರು ವ್ಯಂಗ್ಯಚಿತ್ರಕಾರ ವಿ.ಶಂಕರ್‌ರಿಗೆ ಆಗಾಗ ಹೇಳುತ್ತಿದ್ದರೆಂದು ತಿಳಿಸಿದರು.

ಈ ಮುಕ್ತ ಮಾನಸಿಕತೆ ಹಾಗೂ ಯಥಾರ್ಥ ಟೀಕೆಯ ಕುರಿತು ಮೆಚ್ಚುಗೆ ನಮ್ಮ ಮಹಾನ್ ರಾಷ್ಟ್ರದ ಪ್ರೀತಿಸಬಹುದಾದ ಪರಂಪರೆಗಳಲ್ಲಿ ಒಂದಾಗಿದೆ. ಅದನ್ನು ನಾವು ಉಳಿಸಬೇಕು ಹಾಗೂ ಬಲಪಡಿಸಬೇಕೆಂದು ಅವರು ಹೇಳಿದರು.

ಭಾರತದಲ್ಲಿ ಪತ್ರಿಕಾ ಸ್ವಾತಂತ್ರವು ಮೂಲಭೂತ ಹಕ್ಕಾಗಿ ಸಂವಿಧಾನವು ಖಾತ್ರಿಪಡಿಸಿರುವ ಅಭಿವ್ಯಕ್ತಿ ಸ್ವಾತಂತ್ರದ ಭಾಗವಾಗಿದೆ. ಪ್ರಜಾಪ್ರಭುತ್ವದಲ್ಲಿ ಆಗಾಗ ವಿವಿಧ ಸವಾಲುಗಳೇಳುತ್ತವೆ. ಅವುಗಳನ್ನು ಒಟ್ಟಾಗಿ ಪರಿಹರಿಸಬೇಕೆಂದು ಪ್ರಣವ್ ತಿಳಿಸಿದರು.

ಕಾನೂನಿನ ಅಕ್ಷರ ಹಾಗೂ ಸ್ಫೂರ್ತಿ ಸದಾ ಜೀವಂತ ವಾಸ್ತವವಾಗಿರುವುದನ್ನು ನಾವು ಖಚಿತಪಡಿಸಬೇಕು ಎಂದವರು ಕರೆ ನೀಡಿದರು. ದೇಶದಲ್ಲಿ ವರ್ತಮಾನ ಪತ್ರಿಕೆಗಳು ಹಾಗೂ ಸಂಸ್ಥೆಗಳ ಬೆಳವಣಿಗೆಯು ನಮ್ಮ ಸ್ವಾತಂತ್ರ ಹೋರಾಟದಲ್ಲಿ ಬೇರುಗಳನ್ನು ಹೊಂದಿದೆಯೆಂದು ಅವರು ಹೇಳಿದರು. ಸಮಾರಂಭದಲ್ಲಿ ಕೇಂದ್ರ ಮಾಹಿತಿ ಹಾಗೂ ಪ್ರಸಾರ ರಾಜ್ಯ ಸಚಿವ ರಾಜವರ್ಧನ ರಾಥೋರ್ ಹಾಗೂ ಪಿಸಿಐ ಅಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ) ಸಿ.ಕೆ.ಪ್ರಸಾದ್ ಉಪಸ್ಥಿತರಿದ್ದರು.

Write A Comment