ರಾಷ್ಟ್ರೀಯ

ಪಾನ್ ಕಾರ್ಡ್‌ಗೆ 1 ರೂ. ಹೆಚ್ಚಳ

Pinterest LinkedIn Tumblr

Panಹೊಸದಿಲ್ಲಿ, ನ.15: ರವಿವಾರದಿಂದ ಎಲ್ಲ ತೆರಿಗೆಯೋಗ್ಯ ಸೇವೆಗಳ ಮೇಲೆ ಶೇ.0.5ರಷ್ಟು ಸ್ವಚ್ಛ ಭಾರತ ಮೇಲ್ತೆರಿಗೆ (ಸೆಸ್) ವಿಧಿಸಿರುವುದರಿಂದ ಹೊಸ ಪಾನ್ ಕಾರ್ಡ್ (ಶಾಶ್ವತ ಖಾತೆ ಸಂಖ್ಯೆ) ಪಡೆಯುವುದು ರೂ. 1ರಷ್ಟು ದುಬಾರಿಯಾಗಿದ್ದು, ಇನ್ನು ಮುಂದೆ 107 ರೂ. ಪಾವತಿಸಬೇಕಾಗುತ್ತದೆ.

ಪರಿಷ್ಕೃತ ದರದನ್ವಯ ವ್ಯಕ್ತಿ ಅಥವಾ ಸಂಸ್ಥೆಗೆ ಆರ್ಥಿಕ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಕೊಡಲಾಗುವ ಪಾನ್ ಕಾರ್ಡ್‌ಗೆ ರೂ. 106ರ ಬದಲು ರೂ.107 ಪಾವತಿಸಬೇಕಾಗುತ್ತದೆ.
ಅದೇ ರೀತಿ, ಭಾರತದಿಂದ ಹೊರಗಿರುವ ವ್ಯಕ್ತಿ ಅಥವಾ ಸಂಸ್ಥೆಗೆ ನೀಡಲಾಗುವ ಪಾನ್ ಕಾರ್ಡ್‌ಗೆ ರೂ. 4 ಹೆಚ್ಚು ಅಂದರೆ ರೂ. 989 ಪಾವತಿಸಬೇಕಾಗುತ್ತದೆ.
ಹಣಕಾಸು ಕಾಯ್ದೆ-2015ರನ್ವಯ ಶೇ.0.5 ಸ್ವಚ್ಛ ಭಾರತ ಮೇಲ್ತೆರಿಗೆಯ ಪ್ರಸ್ತಾಪವು 2015ರ ನ.15ರಿಂದ ಅನ್ವಯವಾಗುತ್ತದೆ. ಅದರಂತೆಯೇ ಪಾನ್ ಕಾರ್ಡ್‌ನ ಸೇವಾ ತೆರಿಗೆ ದರವು ಶೇ.14ರಿಂದ ಶೇ.14.5ಕ್ಕೇರಿದೆಯೆಂದು ಈ ಸಂಬಂಧ ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆ ತಿಳಿಸಿದೆ.
ಪಾನ್ (ಪಿಎಎನ್) ಎಂಬುದು ಆದಾಯ ತೆರಿಗೆ ಇಲಾಖೆಯು, ತೆರಿಗೆದಾರರಿಗೆ ನೀಡುವ 10 ಅಂಕೆಗಳ ವಿಶಿಷ್ಟ ಸಂಖ್ಯೆಯಾಗಿರುತ್ತದೆ. ಆದಾಯ ತೆರಿಗೆ ಇಲಾಖೆಯು ಯುಟಿಐಐಟಿಎಸ್‌ಎಲ್ ಹಾಗೂ ಎನ್‌ಎಸ್‌ಡಿಎಲ್ ಎಂಬ ಎರಡು ಸಂಸ್ಥೆಗಳಿಗೆ ಪಾನ್ ಸಂಖ್ಯೆಗಳನ್ನು ವಿತರಿಸಲು ಅಧಿಕಾರ ನೀಡಿದೆ.

Write A Comment