ಕರ್ನಾಟಕ

ದಲಿತರು ಹಿಂದೂಗಳಲ್ಲ: ಅಂಬೇಡ್ಕರ್ 125ನೆ ಜಯಂತ್ಯುತ್ಸವದಲ್ಲಿ ಆನಂದರಾಜ್ ಅಂಬೇಡ್ಕರ್

Pinterest LinkedIn Tumblr

ambedkar2ಬೆಂಗಳೂರು, ನ.15: ಹಿಂದೂ ಧರ್ಮದ ಚಾತುರ್ವರ್ಣದಲ್ಲಿ ಸ್ಥಾನ ಪಡೆಯದ ದಲಿತರು ಹಿಂದೂಗಳು ಎಂದು ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಮೊಮ್ಮಗ ಆನಂದರಾಜ್ ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಸಚಿವಾಲಯ ಕ್ಲಬ್‌ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಂಘ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್‌ರವರ 125ನೆ ಜಯಂತ್ಯುತ್ಸವದ ವರ್ಷಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ದಲಿತರೇತರ ಜಾತಿಗಳಿಗೆ ಹಿಂದೂ ಧರ್ಮದ ಚಾತುರ್ವರ್ಣಗಳಾದ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ವರ್ಗಗಳಲ್ಲಿ ಸ್ಥಾನವಿದೆ. ಆದರೆ ಹಿಂದೂ ಸಮಾಜ ದಲಿತರನ್ನು ಯಾವುದೇ ವರ್ಣದಲ್ಲಿ ಗುರುತಿಸುವುದಿಲ್ಲ. ಹೀಗಾಗಿ ದಲಿತರು ಹಿಂದೂಗಳೆಂದು ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮೇಲ್ಜಾತಿಯಲ್ಲಿ ಹುಟ್ಟಿದ ವ್ಯಕ್ತಿಯೊಬ್ಬನನ್ನು ದೇಶದ ದೊಡ್ಡ ನಾಯಕನಾಗಿ ಸಮಾಜ ಸ್ವೀಕರಿಸುತ್ತದೆ.
ಆದರೆ ಹಿಂದೂ ಧರ್ಮದೊಳಗೇ ಇರುವ ದಲಿತ ಸಮುದಾಯದ ವ್ಯಕ್ತಿಯನ್ನು ನಾಯಕ ಎಂದು ಒಪ್ಪಿಕೊಳ್ಳಲು ಜನ ಹಿಂದೆ ಸರಿಯುತ್ತಾರೆ. ಈ ತಾರತಮ್ಯವು ಅಸ್ಪಶ್ಯತೆಯ ಮುಂದುವರಿದ ಭಾಗ ಎಂದು ವಿಷಾದಿಸಿದರು.
ಮೀಸಲಾತಿ ವಿರುದ್ಧ ಅಪಸ್ವರ ಎತ್ತುತ್ತಿರುವ ಬಿಜೆಪಿ ಸಂಘ ಪರಿವಾರದ ಮುಖಂಡರ ವಿರುದ್ಧ ಮೀಸಲಾತಿಯ ಸವಲತ್ತು ಪಡೆದವರೆಲ್ಲರೂ ಒಂದಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದ ಆನಂದ್‌ರಾಜ್, ಇತ್ತೀಚೆಗೆ ನಡೆದ ಬಿಹಾರ ಚುನಾವಣೆಯಲ್ಲಿ ಜನತೆ ಮೀಸಲಾತಿಯ ಅಪಸ್ವರಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ದಲಿತ, ಕಾರ್ಮಿಕ, ಮಹಿಳೆಯರ ಕಲ್ಯಾಣಕ್ಕಾಗಿ ಮಾತ್ರವಲ್ಲದೆ ದೇಶದ ಎಲ್ಲ ಜಾತಿ ಸಮುದಾಯಗಳ ಏಳಿಗೆಗೂ ಶ್ರಮಿಸಿದ್ದಾರೆ. ಹೀಗಾಗಿಯೇ ಇವರು ವಿಶ್ವ ನಾಯಕರಾಗಿ ಪ್ರಖ್ಯಾತರಾಗಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಸೃಷ್ಟಿಯಾಗಿರುವ ಹಿಂಸಾವಾದವನ್ನು ತಡೆಯಲು ಅಂಬೇಡ್ಕರ್‌ರವರ ವಿಚಾರ ಮತ್ತು ಆಶಯಗಳನ್ನು ಪ್ರಚುರ ಪಡಿಸುವ ಕಾರ್ಯ ಅನುಷ್ಠಾನಗೊಳಿಸಬೇಕಿದೆ ಎಂದು ಇದೇ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಂಘದ ರಾಜ್ಯಾಧ್ಯಕ್ಷ ಎಫ್.ಎಚ್. ಜಕ್ಕಪ್ಪ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ಅರಾಜಕತೆಯನ್ನು ಸರಕಾರದಿಂದ ಮಟ್ಟಹಾಕಲು ಸಾಧ್ಯವಿಲ್ಲ.
ಈ ನಿಟ್ಟಿನಲ್ಲಿ ಕೋಮುವಾದದ ವಿರುದ್ಧ ದಲಿತ ಚಳವಳಿಗಾರರು ಒಕ್ಕೊರಲಿನಿಂದ ಹೋರಾಟ ಮಾಡಬೇಕಿದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ರವರ 125ನೆ ಜಯಂತಿಯನ್ನು ರಾಜ್ಯಾದ್ಯಂತ ವರ್ಷಪೂರ್ತಿ ಆಚರಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ 125ನೆ ಜಯಂತಿ ಅಂಗವಾಗಿ ಅಂಬೇಡ್ಕರ್ ಭಾವಚಿತ್ರವಿರುವ ಲಾಂಛನವನ್ನು ಬಿಡುಗಡೆಗೊಳಿಸಲಾಗಿದೆ. ಈ ಲಾಂಛನವನ್ನು ಸಾರಿಗೆ ಸಂಸ್ಥೆಯ ಎಲ್ಲ ವಾಹನಗಳಲ್ಲಿ ಅಂಟಿಸಿ ಸಾರ್ವಜನಿಕರಿಗೆ ಅಂಬೇಡ್ಕರ್‌ರವರ ಆಚಾರ, ವಿಚಾರ, ಸಾಧನೆಗಳನ್ನು ಪ್ರಚಾರ ಮಾಡಬೇಕೆಂದು ನೆರೆದಿದ್ದ ಸಾರಿಗೆ ನೌಕರರಿಗೆ ಕರೆ ನೀಡಿದರು.
ರಿಪಬ್ಲಿಕ್ ಸೇನೆಯ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಮಾತನಾಡಿ, ದೇಶಕ್ಕಾಗಿ ದುಡಿದ ನೆಹರೂ ಮತ್ತು ಅಂಬೇಡ್ಕರ್ ಸಮಕಾಲಿನರು. ಸದ್ಯಮೂರನೇ ತಲೆಮಾರಿನಲ್ಲಿರುವ ನೆಹರೂ ಕುಟುಂಬಕ್ಕೆ ಸಲ್ಲುತ್ತಿರುವ ಗೌರವ, ಸ್ಥಾನಮಾನ ಅಂಬೇಡ್ಕರ್‌ರ ಮೂರನೆ ತಲೆಮಾರಿನ ಕುಟುಂಬಕ್ಕೆ ಸಮಾಜ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾವಳ್ಳಿ ಶಂಕರ್ ಮಾತನಾಡಿ, ದೇಶದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆ ವಿರುದ್ಧ ಯುವಕರು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಚ್.ಬಿ.ದೊಡ್ಡಮನಿ, ಚಂದ್ರಕಾಂತ ಗದ್ದಿಗಿ, ಕೆ.ಎಂ.ಯೋಗಾನಂದ, ಅಶೋಕ ರಾ. ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.

Write A Comment