ರಾಷ್ಟ್ರೀಯ

ಸ್ವಚ್ಛ ಭಾರತ ಮೇಲ್ತೆರಿಗೆ ಜಾರಿ: ಹೊಟೇಲ್ ಬಿಲ್, ದೂರಸಂಪರ್ಕ ದುಬಾರಿ

Pinterest LinkedIn Tumblr

Coastlyಹೊಸದಿಲ್ಲಿ, ನ.15: ಹೊಟೇಲ್-ರೆಸ್ಟೋರಂಟ್, ದೂರಸಂಪರ್ಕ (ಮೊಬೈಲ್ ಹಾಗೂ ಟೆಲಿಫೋನ್) ಹಾಗೂ ಪ್ರಯಾಣ ದರಗಳು ರವಿವಾರದಿಂದ ದುಬಾರಿಯಾಗಲಿವೆ. ತೆರಿಗೆ ವಿಧಿಸಲ್ಪಡುವ ಸೇವೆಗಳಿಗೆ ಸ್ವಚ್ಛಭಾರತ ಯೋಜನೆಯ ಅಂಗವಾಗಿ ಶೇ.0.5 ಮೇಲ್ತೆರಿಗೆ (ಸೆಸ್) ಯನ್ನು ಕೇಂದ್ರ ಸರಕಾರ ವಿಧಿಸಿರುವ ಹಿನ್ನೆಲೆಯಲ್ಲಿ ಈ ಸೇವೆಗಳ ದರಗಳಲ್ಲಿ ಏರಿಕೆಯಾಗಿದೆ.ಇದ ರಿಂದಾಗಿ ಪ್ರಸಕ್ತ ಹಣಕಾಸು ವರ್ಷ ದಲ್ಲಿ ಕೇಂದ್ರದ ಬೊಕ್ಕಸಕ್ಕೆ 3,800 ಕೋಟಿ ರೂ. ಹೆಚ್ಚುವರಿ ಆದಾಯ ದೊರೆಯುವ ನಿರೀಕ್ಷೆಯಿದೆ.

ಸೆಸ್ ಹೇರಿಕೆಯಿಂದಾಗಿ, ಎಲ್ಲ ತೆರಿಗೆ ಯೋಗ್ಯ ಸೇವೆಗಳ ಸೇವಾತೆರಿಗೆ ದರವು ಶೇ.14ರಿಂದ ಶೇ.14.5ಕ್ಕೆ ಏರಿಕೆಯಾಗಲಿದೆ.

ಸ್ವಚ್ಚ ಭಾರತ ಮೇಲ್ತೆರಿಗೆಯಿಂದಾಗಿ ಸಂಗ್ರಹವಾಗುವ ಆದಾಯವು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನಕ್ಕೆ ಆರ್ಥಿಕ ನಿಧಿಯಾಗಿ ಬಳಸಿಕೊಳ್ಳಲಾಗುವುದು.

0.5 ಶೇ. ಸ್ವಚ್ಛಭಾರತ ಸೆಸ್ ಹೇರಿಕೆಯಿಂದಾಗಿ ರೆಸ್ಟಾರೆಂಟ್-ಹೊಟೇಲ್ ಬಿಲ್ ಗಳ ಸೇವಾತೆರಿಗೆ ದರವು ಶೇ. 5.6ರಿಂದ ಶೇ.5.8ಕ್ಕೇರಲಿದೆ.
ನವೆಂಬರ್ 15ಕ್ಕಿಂತ ಮೊದಲು ಹಣ ಪಡೆದಿರುವ ಹಾಗೂ ನ.29ಕ್ಕಿಂತ ಮೊದಲು ಸರಕುಪಟ್ಟಿ (ಇನ್‌ವಾಯ್ಸಿ) ಸಿದ್ಧಪಡಿಸಲಾದ ಸೇವೆಗಳಿಗೆ ಸ್ವಚ್ಛಭಾರತ ತೆರಿಗೆ ಅನ್ವಯವಾಗುವುದಿಲ್ಲವೆಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಸ್ವಚ್ಛ ಭಾರತ ಮೇಲ್ತೆರಿಗೆಯಿಂದ ಸರಕಾರವು ಸಂಪೂರ್ಣ ವರ್ಷಕ್ಕೆ ಸುಮಾರು ರೂ. 10 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆ ಹೊಂದಿದೆ. ಆದುದರಿಂದ 2016ರ ಮಾ.31ರ ವರೆಗಿನ ಪ್ರಸಕ್ತ ವಿತ್ತ ವರ್ಷದ ಉಳಿದ ಭಾಗದಲ್ಲಿ ಈ ತೆರಿಗೆಯು ಬೊಕ್ಕಸಕ್ಕೆ ಸುಮಾರು 3800 ಕೋಟಿ ರೂ.ಗಳನ್ನು ತಂದುಕೊಡಲಿದೆ.
ಶೇ.0.5 ಸ್ವಚ್ಛ ಭಾರತ ತೆರಿಗೆ ಹೇರಿಕೆ ನಿರ್ಧಾರದಿಂದಾಗಿ ರೂ. 100ಗಳ ತೆರಿಗೆ ವಿಧಿಸಬಹುದಾದ ಸೇವೆಗೆ ಕೇವಲ 50 ಪೈಸೆ ತೆರಿಗೆಯನ್ನು ಹೆಚ್ಚಿಗೆ ನೀಡಬೇಕಾಗುತ್ತದೆ.
ಹವಾ ನಿಯಂತ್ರಣ ವ್ಯವಸ್ಥೆ ಹೊಂದಿರುವ ರೆಸ್ಟೊರೆಂಟ್ ಅಥವಾ ಖಾನಾವಳಿಗಳ ಶೇ.4ರಷ್ಟು ಬಿಲ್‌ಮೊತ್ತದ ಶೇ.0.5 ಭಾಗವು ಸ್ವಚ್ಛಭಾರತ ಮೇಲ್ತೆರಿಗೆಯಾಗಿರುವುದು.
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ 2015-16ನೆ ಸಾಲಿನ ಬಜೆಟ್‌ನಲ್ಲಿ ಅಗತ್ಯವಾದಲ್ಲಿ ‘ಎಲ್ಲಾ ಅಥವಾ ನಿರ್ದಿಷ್ಟ ಸೇವೆಗಳಿಗೆ’ ಶೇ.2ರ ವರೆಗೆ ಸ್ವಚ್ಛ ಭಾರತ ತೆರಿಗೆ ವಿಧಿಸುವ ಪ್ರಸ್ತಾಪ ಮಾಡಿದ್ದರು.
ಸ್ವಚ್ಛ ಭಾರತ ಮೇಲ್ತೆರಿಗೆಯು, ಇತರ ಸಾಮಾನ್ಯ ತೆರಿಗೆಗಳ ಹಾಗಲ್ಲ. ಅದು ಪ್ರತಿಯೊಬ್ಬ ನಾಗರಿಕನನ್ನು ಸ್ವಚ್ಛ ಭಾರತ ಅಭಿಯಾನದಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಇರಿಸಲಾದ ಒಂದು ಹೆಜ್ಜೆಯಾಗಿದೆ. ಈ ಸೆಸ್‌ನಿಂದಾಗಿ ದೊರಕುವ ಆದಾಯವನ್ನು ಸಂಪೂರ್ಣವಾಗಿ ಸ್ವಚ್ಛ ಭಾರತ ಕಾರ್ಯಕ್ರಮಗಳಿಗೆ ಬಳಸಲಾಗುವುದೆಂದು ಸ್ವಚ್ಛ ಭಾರತ ಸೆಸ್ ಕುರಿತ ಅಧಿಸೂಚನೆಯಲ್ಲಿ ವಿತ್ತ ಸಚಿವಾಲಯ ವಿವರಿಸಿದೆ.
ಸರಕಾರವು 2015-16ನೆ ಸಾಲಿನ ಬಜೆಟ್‌ನಲ್ಲಿ ಸೇವಾ ತೆರಿಗೆಯಿಂದ ರೂ. 2.09 ಲಕ್ಷ ಕೋಟಿ ಸಂಗ್ರಹಿಸುವ ಅಂದಾಜು ಮಾಡಿತ್ತು. ಈ ರೂ. 3,800 ಕೋಟಿ ಸ್ವಚ್ಛ ಭಾರತ ಮೇಲ್ತೆರಿಗೆಯು ಈ ಅಂದಾಜುಮೊತ್ತದಿಂದ ಹೊರತಾಗಿದೆ.

Write A Comment