ರಾಷ್ಟ್ರೀಯ

ಬಂಡಾಯಕ್ಕೆ ಮತ್ತಿಬ್ಬರು ಸಂಸದರ ಬೆಂಬಲ; ನಾಯಕತ್ವದ ವಿರುದ್ಧ ದನಿ ಎತ್ತಿದವರ ಸಾಲಿಗೆ ಸೇರಿದ ಆರ್‌.ಕೆ.ಸಿಂಗ್‌, ಮನೋಜ್‌ ತಿವಾರಿ

Pinterest LinkedIn Tumblr

manoನವದೆಹಲಿ: ಬಿಹಾರ ಚುನಾವಣೆ ಸೋಲಿಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿನ ಭಿನ್ನಮತ ಶಮನವಾಗುವಂತೆ ಕಾಣಿಸುತ್ತಿಲ್ಲ. ಬಿಹಾರದಲ್ಲಿ ಬಿಜೆಪಿಯ ಚುನಾವಣಾ ಕಾರ್ಯತಂತ್ರ ಸರಿ ಇರಲಿಲ್ಲ ಎಂದು ಪಕ್ಷದ ಸಂಸದ ಮನೋಜ್‌ ತಿವಾರಿ ಹೇಳಿದರೆ, ಎಲ್‌.ಕೆ. ಅಡ್ವಾಣಿ ಸೇರಿ ಹಿರಿಯರು ಹೇಳಿರುವಂತೆ ಚುನಾವಣೆ ಸೋಲಿಗೆ ಹೊಣೆ ನಿಗದಿಪಡಿಸಬೇಕು ಎಂದು ಭಿನ್ನಮತೀಯ ಸಂಸದ ಆರ್‌.ಕೆ.ಸಿಂಗ್‌  ಹೇಳಿದ್ದಾರೆ.

‘ಹೊಣೆಗಾರಿಕೆ ನಿಗದಿ ಮಾಡಲೇಬೇಕು. ಚುನಾವಣೆ ಸೋಲಿನ ಬಗ್ಗೆ ವಿಮರ್ಶೆಯೂ ನಡೆಯಬೇಕು. ಏನು ತಪ್ಪಾಯಿತು ಮತ್ತು ಯಾರು ಹೊಣೆಗಾರರು ಎಂಬುದನ್ನು ಕಂಡುಕೊಳ್ಳಬೇಕು. ಅದನ್ನೇ ಮಾರ್ಗದರ್ಶಕ ಮಂಡಳಿ ಹೇಳಿದೆ’ ಎಂದು ಆರಾ ಸಂಸದ ಆರ್‌.ಕೆ.  ಸಿಂಗ್‌ ಅವರು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎಯ ಅಭ್ಯರ್ಥಿ ಆಯ್ಕೆ ಬಗ್ಗೆಯೇ ಮಾಜಿ ಗೃಹ ಕಾರ್ಯದರ್ಶಿ ಸಿಂಗ್‌ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಅಪರಾಧ ಹಿನ್ನೆಲೆಯವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಅವರಲ್ಲಿ ಕೆಲವರಂತೂ ಸಾಮಾನ್ಯ ಅಪರಾಧಿಗಳಲ್ಲ, ಅವರ ಪತ್ತೆಗೆ ಸರ್ಕಾರ ಬಹುಮಾನ
ವನ್ನೂ ಘೋಷಿಸಿತ್ತು ಎಂದು ಸಿಂಗ್‌ ಟೀಕಿಸಿದ್ದಾರೆ.

‘ನಮ್ಮದು ಭಿನ್ನ ಪಕ್ಷ ಎಂದು ಭಾವಿಸಿದ್ದೆವು. ನಾವು ಸ್ವಚ್ಛ ಸರ್ಕಾರ ನೀಡುಬಹುದೆಂಬ ನಂಬಿಕೆ ಇತ್ತು. ಆದರೆ ಪಕ್ಷದ ಟಿಕೆಟ್‌ಗಳನ್ನು ಅಪರಾಧಿಗಳಿಗೆ ನೀಡಲಾಗಿದೆ. ಇದು ಅತ್ಯಂತ ಕೆಟ್ಟ ಮತ್ತು ಅತ್ಯಂತ ಬೇಸರದ ವಿಚಾರ’ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿಂಗ್‌ ಹೇಳಿದ್ದಾರೆ.

ಬಿಹಾರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಭೋಜ್‌ಪುರಿ ಗಾಯಕ, ಈಶಾನ್ಯ ದೆಹಲಿ ಸಂಸದ ಮನೋಜ್‌ ತಿವಾರಿ ಅವರೂ ಪಕ್ಷದ ಚುನಾವಣಾ ಕಾರ್ಯತಂತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮತದಾರರಿಗೆ ಮನವರಿಕೆ ಮಾಡಲು ನಾವು ವಿಫಲರಾದೆವು.

ಜನರನ್ನು ತಲುಪಲು ಇನ್ನೂ ಉತ್ತಮವಾದ ಕಾರ್ಯತಂತ್ರವನ್ನು ನಾವು ಹಾಕಿಕೊಳ್ಳಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  ಶತ್ರುಘ್ನ ಸಿನ್ಹಾ, ಹುಕುಂ ದೇವ್‌ ನಾರಾಯಣ್‌, ಭೋಲಾ ಸಿಂಗ್‌ ಸೇರಿ ಬಿಹಾರದ ಕೆಲವು ಬಿಜೆಪಿ ಸಂಸದರು ಚುನಾವಣಾ ನಿರ್ವಹಣೆ ಬಗ್ಗೆ ಪಕ್ಷದ ನಾಯಕತ್ವದ ವಿರುದ್ಧ ಈಗಾಗಲೇ ಟೀಕೆ ಮಾಡಿದ್ದಾರೆ. ಈ ಪಟ್ಟಿಗೆ ಈಗ ಆರ್‌.ಕೆ.ಸಿಂಗ್‌ ಮತ್ತು ತಿವಾರಿ   ಸೇರಿಕೊಂಡಿದ್ದಾರೆ.

ಬಂಡಾಯ ಮುಖಂಡರ ಭೇಟಿ: ನಾಯಕತ್ವದ ವಿರುದ್ಧ ಬಂಡಾಯ ಎದ್ದಿರುವ ಹಿರಿಯ ಮುಖಂಡರು ಶುಕ್ರವಾರ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಯಶವಂತ ಸಿನ್ಹಾ ಅವರು ಎಲ್‌. ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರನ್ನು ಭೇಟಿಯಾದರು. ನಾಯಕತ್ವವನ್ನು ಟೀಕಿಸಿರುವ ಮುಖಂಡರನ್ನು ಸಂಪರ್ಕಿಸಲು ಪಕ್ಷ ನಡೆಸಿದ ಪ್ರಯತ್ನವನ್ನು ಬಂಡಾಯ ಹೇಳಿಕೆಗೆ ಸಹಿ ಹಾಕಿದ್ದ ನಾಲ್ಕನೇ ಮುಖಂಡ ಶಾಂತಕುಮಾರ್‌ ಅವರು ಸ್ವಾಗತಿಸಿದ್ದಾರೆ.

ಹಿರಿಯರನ್ನು ಅವಮಾನಿಸಿಲ್ಲ: ಗಡ್ಕರಿ ಸ್ಪಷ್ಟನೆ
ನಾಗ್ಪುರ (ಪಿಟಿಐ): ಬಿಹಾರ ವಿಧಾನಸಭೆ ಚುನಾವಣೆಯ ಹಿನ್ನಡೆ ಬಗ್ಗೆ ಪಕ್ಷದ ಹಿರಿಯ ಮುಖಂಡರು ಎತ್ತಿರುವ ಪ್ರಶ್ನೆಗಳನ್ನು ಪಕ್ಷದ ಕೇಂದ್ರ ನಾಯಕತ್ವ ಚರ್ಚಿಸುತ್ತಿದೆ  ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಪಕ್ಷದ ಹಿರಿಯ ಮುಖಂಡರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿಯೇ ಇಲ್ಲ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

‘ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಸೇರಿ ಪಕ್ಷದ ಹಿರಿಯರು ನಾವು ಭಾರಿ ಗೌರವ ಹೊಂದಿರುವ ಮುಖಂಡರು. ನಾನಾಗಲಿ ಪಕ್ಷದ ಇತರರಾಗಲಿ ಅವರನ್ನು ಅಗೌರವದಿಂದ ಕಾಣುವುದೇ ಇಲ್ಲ. ಅವರಿಂದ ವಿವರಣೆ ಕೇಳುವುದಾಗಲಿ ಅಥವಾ ಶಿಸ್ತು ಕ್ರಮಕ್ಕೆ ಬೇಡಿಕೆ ಇಡುವುದಾಗಲಿ ಇಲ್ಲವೇ ಇಲ್ಲ’ ಎಂದು ಗಡ್ಕರಿ ಹೇಳಿದ್ದಾರೆ. ಬಿಹಾರದ ಸೋಲಿಗೆ ಸಂಬಂಧಿಸಿ ಅಡ್ವಾಣಿ ಸೇರಿ ಪಕ್ಷದ ನಾಲ್ವರು ಹಿರಿಯರು ಎತ್ತಿರುವ ಪ್ರಶ್ನೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂಬ ನಿಲುವನ್ನೇ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೊಂದಿದ್ದಾರೆ ಎಂದು ಗುರುವಾರ ವರದಿಯಾಗಿತ್ತು.

‘ಪಕ್ಷದ ಹಿರಿಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ಅಧ್ಯಕ್ಷ ಅಮಿತ್‌ ಷಾ ಅವರಲ್ಲಿ ಕೇಳಿಕೊಂಡಿದ್ದೇನೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಇದು ಸಂಪೂರ್ಣ ತಪ್ಪು’ ಎಂದು ನಿತಿನ್‌ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ.

Write A Comment