ರಾಷ್ಟ್ರೀಯ

ಬಂಗಲೆಗಾಗಿ ರಾಜ್ಯಸಭೆಗೆ ರಾಬ್ಡಿದೇವಿ

Pinterest LinkedIn Tumblr

pvec141115rabriನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ತಮ್ಮ ಪತ್ನಿ ರಾಬ್ಡಿ ದೇವಿಯನ್ನು ರಾಜ್ಯಸಭೆಗೆ ಕಳುಹಿಸುವ ಸಾಧ್ಯತೆ ಇದೆ. ದೆಹಲಿಯ ಪ್ರತಿಷ್ಠಿತ ಲ್ಯುಟೆನ್ಸ್‌ ಪ್ರದೇಶದಲ್ಲಿ ಲಾಲು ಅವರಿಗೆ ಒಂದು ಬಂಗಲೆ ಬೇಕಾಗಿದೆ. ರಾಬ್ಡಿ ಅವರು ಮಾಜಿ ಮುಖ್ಯಮಂತ್ರಿಯಾಗಿರುವುದರಿಂದ ಅವರು ರಾಜ್ಯಸಭೆಗೆ ಆಯ್ಕೆಯಾದರೆ ಲ್ಯುಟೆನ್ಸ್‌ ಪ್ರದೇಶದಲ್ಲಿ ಭಾರಿ ಬಂಗಲೆ ಅವರಿಗೆ ದೊರೆಯುತ್ತದೆ.

ಮುಂದಿನ ವರ್ಷದ ಆರಂಭದಲ್ಲಿ ಬಿಹಾರದಿಂದ ರಾಜ್ಯಸಭೆಗೆ ಐವರು ಆಯ್ಕೆಯಾಗಲಿದ್ದಾರೆ. ಅದರಲ್ಲಿ ಕನಿಷ್ಠ ಎರಡು ಸ್ಥಾನಗಳು ಆರ್‌ಜೆಡಿಗೆ ದೊರೆಯಬಹುದು. ಮಗಳು ಮೀಸಾ ಭಾರತಿ ಯನ್ನು ರಾಜ್ಯಸಭೆಗೆ ಕಳುಹಿಸುವ ಬಗ್ಗೆಯೂ ಲಾಲು ಯೋಚಿಸುತ್ತಿದ್ದಾರೆ ಎಂಬ ಸುದ್ದಿಗಳಿವೆ. ಯಾಕೆಂದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಮೀಸಾ ಅವರಿಗೆ ರಾಜಕೀಯದಲ್ಲಿ ನೆಲೆಯೂರಲು ಇನ್ನೊಂದು ಅವಕಾಶ ತುರ್ತಾಗಿ ಬೇಕಾಗಿದೆ. ಆದರೆ ಮೀಸಾ ಹೊಸಬರಾಗಿರುವುದರಿಂದ ಅವರಿಗೆ ಬಂಗಲೆ ದೊರೆಯುವುದಿಲ್ಲ.

ಮೇವು ಹಗರಣದಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದ ಕಾರಣ 2013ರಲ್ಲಿ ಲಾಲು ಸಂಸತ್‌ ಸದಸ್ಯತ್ವ ಕಳೆದುಕೊಂಡಿದ್ದರು. ಹಾಗಾಗಿ ತುಘಲಕ್‌ ರಸ್ತೆಯಲ್ಲಿ ಅವರಿಗೆ ನೀಡಲಾಗಿದ್ದ ಬಂಗಲೆಯೂ ರದ್ದಾಗಿತ್ತು. ಆದರೆ ಆಗಿನ ಯುಪಿಎ ಸರ್ಕಾರ ಲಾಲು ಅವರಿಗೆ ಆರೋಗ್ಯ ಸಮಸ್ಯೆ ಇದೆ ಎಂಬ ಕಾರಣಕ್ಕೆ ಬಂಗಲೆಯಲ್ಲಿ ವಾಸ್ತವ್ಯ ಮುಂದುವರಿಸಲು ಅವಕಾಶ ನೀಡಿತ್ತು. ಒಂದು ವರ್ಷದ ವಿಸ್ತರಣೆ ಅವಧಿ 2014ರ ಅಕ್ಟೋಬರ್‌ 31ಕ್ಕೆ ಕೊನೆಗೊಂಡಿತ್ತು. ಎನ್‌ಡಿಎ ಸರ್ಕಾರ ಮತ್ತೆ ವಿಸ್ತರಣೆ ಮಾಡಲು ಒಪ್ಪಲಿಲ್ಲ. 2015ರ ಜನವರಿಯಲ್ಲಿ ಲಾಲು ಬಂಗಲೆ ತೆರವುಗೊಳಿಸಿದ್ದರು.

Write A Comment