ರಾಷ್ಟ್ರೀಯ

ಊಹಾಪೋಹಕ್ಕೆ ಎಡೆಮಾಡಿಕೊಟ್ಟ ಪ್ರಶಾಂತ್ ಕಿಶೋರ್-ಅರುಣ್ ಶೌರಿ ಭೇಟಿ

Pinterest LinkedIn Tumblr

nitish-prashantನವದೆಹಲಿ: ಬಿಹಾರ ಚುನಾವಣೆಗಳಲ್ಲಿ ನಿತೀಶ್ ಕುಮಾರ್ ಗೆಲುವಿಗೆ ತಂತ್ರಗಾರಿಕೆಯ ವ್ಯೂಹ ರಚಿಸಿದ್ದ ಪ್ರಶಾಂತ್ ಕಿಶೋರ್ ಅವರು ಪಕ್ಷದ ಬಗ್ಗೆ ಅಸಮಾಧಾನ ತಳೆದಿರುವ ಬಿಜೆಪಿಯ ಹಿರಿಯ ನಾಯಕ ಅರುಣ್ ಶೌರಿ ಅವರನ್ನು ಭೇಟಿ ಮಾಡಿರುವುದು ರಾಜಕೀಯ ಪಂಡಿತರ ನಡುವೆ ಊಹಾಪೋಹಕ್ಕೆ ಎಡೆಮಾಡಿಕೊಟ್ಟಿದೆ.

ಕೆಲವು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ಹಿರಿಯ ನಾಯಕರು ತಿರುಗಿಬಿದ್ದಿದ್ದು, ಅರುಣ್ ಶೌರಿ ಅವರು ಮೋದಿ ಸರ್ಕಾರವನ್ನು ಕಾಂಗ್ರೆಸ್ ಸರ್ಕಾರದ ನೀತಿ ಮತ್ತು ಹಸುವಿನ ರಾಜಕೀಯ ಕೂಡಿದ ರಚನೆಯಷ್ಟೇ ಎಂದಿದ್ದರು. ಅಲ್ಲದೆ ಇತ್ತೀಚಿಗೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅವರು ಬಿಜೆಪಿ ನಾಯಕತ್ವದ ವಿರುದ್ಧ ನೀಡಿದ್ದ ಹೇಳಿಕೆಯ ರೂವಾರಿ ಕೂಡ ಶೌರಿ ಎಂದೇ ಶಂಕಿಸಲಾಗಿತ್ತು,

ಈ ಹಿಂದೆ ಪ್ರಶಾಂತ್ ಕಿಶೋರ್ ಅವರು ೨೦೧೨ ರ ಗುಜರಾತ್ ವಿಧಾನಸಭಾ ಚುನಾವಣೆ ಮತ್ತು ೨೦೧೪ರ ಲೋಕಸಭಾ ಚುನಾವಣೆಗಳಿಗೆ ನರೇಂದ್ರ ಮೋದಿಯವರ ಜೊತೆ ತಂತ್ರಗಾರಿಕೆ ಮಾಡಿ ಗೆಲುವಿಗೆ ಕಾರಣರಾಗಿದ್ದರು. ಈಗ ಹಲವಾರು ರಾಜಕೀಯ ಪಕ್ಷಗಳು ಪ್ರಶಾಂತ್ ಕಿಶೋರ್ ಅವರ ಸಲಹೆಗೆ ಹವಣಿಸುತ್ತಿದ್ದಾರೆ ಎಂದು ವದಂತಿಗಳು ಹಬ್ಬಿವೆ. ಇದರಲ್ಲಿ ಮುಂದಿನ ವರ್ಷ ಚುನಾವಣೆಗೆ ಹೋಗಲಿರುವ  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿ ಎಂ ಸಿ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಕೂಡ ಪ್ರಮುಖರು ಎನ್ನಲಾಗಿದೆ.

ಈ ಮಧ್ಯೆ ರಾಹುಲ್ ಗಾಂಧಿ ಕೂಡ ಪ್ರಶಾಂತ್ ಕಿಶೋರ್ ಅವರನ್ನು ಗುರುವಾರ ಭೇಟಿಯಾಗಿದ್ದರು ಎಂಬ ವದಂತಿಗಳು ದಟ್ಟವಾಗಿವೆ.

Write A Comment